ಬೆಂಗಳೂರು: ಭೈಲಮಂಗಲ ಮಾಜಿ ಶಾಸಕ, ಜೆಡಿಎಸ್ ಮುಖಂಡ ಜಗದೀಶ್ ಮೆಟಗೋಡು ಇಂದು ಯಡಿಯೂರಪ್ಪ ಮನೆಯಲ್ಲಿ ಬಿಜೆಪಿ ಸೇರ್ಪಡೆಯಾದರು.
ಬಿಜೆಪಿ ಶಾಲು ಹೊದಿಸುವ ಮೂಲಕ ಯಡಿಯೂರಪ್ಪ ಅವರು ಜಗದೀಶ್ ಮೆಟಗೋಡು ಅವರನ್ನು ಪಕ್ಷಕ್ಕೆ ಸ್ವಾಗತಿಸಿದ್ರು. ಬಳಿಕ ಮಾತನಾಡಿದ ಅವರು, ಬೆಂಗಳೂರು ದಕ್ಷಿಣ ಕೇತ್ರಕ್ಕೆ ಇಂದು ಅಭ್ಯರ್ಥಿ ಘೋಷಣೆಯಾಗುತ್ತದೆ. ಇದರಲ್ಲಿ ಯಾವುದೇ ರಹಸ್ಯ ಇಲ್ಲ. ಇನ್ನೂ ಕೊಪ್ಪಳ ಟಿಕೆಟ್ ವಿಚಾರವಾಗಿ ಕರಡಿ ಅವರಿಗೆ ಏನು ತೊಂದರೆ ಇಲ್ಲ ಎನ್ನುವ ಮೂಲಕ ಕೊಪ್ಪಳ ಟಿಕೆಟ್ ಸಂಗಣ್ಣ ಅವರಿಗೆ ಸಿಗುವ ಬಗ್ಗೆ ಸುಳಿವು ನೀಡಿದ್ರು.
ಮಂಡ್ಯದಲ್ಲಿ ಸುಮಲತಾ ಅವರಿಗೆ ಬೇಷರತ್ ಬೆಂಬಲ ಘೋಷಿಸಿದ್ದೇವೆ. ಸುಮಲತಾ ಪರ ಕೆಲಸ ಮಾಡಲು ನಮ್ಮ ಕಾರ್ಯಕರ್ತರಿಗೆ ಈಗಾಗಲೇ ತಿಳಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದ್ರು.
ಇನ್ನು ನಟರಾದ ದರ್ಶನ್ ಮತ್ತು ಯಶ್ ಅವರು ಸುಮಲತಾ ಪ್ರಚಾರ ಮಾಡುತ್ತಿರುವ ಹಿನ್ನೆಲೆ ಅವರನ್ನು ಕಳ್ಳ ಜೋಡೆತ್ತು ಎಂದು ಕರೆದಿರುವ ಸಿಎಂ ಮಾತಿಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಮಂಡ್ಯದಲ್ಲಿ ಸೋಲುವ ಭಯದಿಂದ ಹಗುರವಾಗಿ ಮಾತನಾಡ್ತಿದ್ದಾರೆ. ದೇವೇಗೌಡ್ರು ಇಷ್ಟು ವರ್ಷದಲ್ಲಿ ಯಾವತ್ತು ಇಂತ ಇಕ್ಕಟ್ಟಿಗೆ ಸಿಲುಕಿರಲಿಲ್ಲ, ಈಗ ಎಲ್ಲರೂ ತಿರುಗಿಬಿದ್ದಿದ್ದಾರೆ. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲು ನಿಶ್ಚಿತ ಎಂದರು.