ಬೆಂಗಳೂರು: ಅಪರಾಧ ಕೃತ್ಯ ಪ್ರಕರಣಗಳಲ್ಲಿ ವಿಧಿಸಬಹುದಾದ ಶಿಕ್ಷೆ ಪ್ರಮಾಣ ಮೂರು ವರ್ಷಕ್ಕಿಂತ ಕಡಿಮೆ ಇದ್ದಾಗ ಅಂತಹ ಪ್ರಕರಣಗಳ ವಿಚಾರಣೆಯನ್ನು ಮೂರು ವರ್ಷಗಳಿಗೆ ಮುನ್ನವೇ ಆರಂಭಿಸಬೇಕು. ಈ ಅವಧಿಯ ನಂತರ ವಿಚಾರಣೆ ಕೈಗೆತ್ತಿಕೊಳ್ಳುವುದು ನಿಯಮಬಾಹಿರವಾಗುತ್ತದೆ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಸಬ್ಇನ್ಸ್ಪೆಕ್ಟರ್ ಒಬ್ಬರು ತನ್ನ ಮೇಲಧಿಕಾರಿ ಇನ್ಸ್ಪೆಕ್ಟರ್ಗೆ ನಿಂದಿಸಿದ ಆರೋಪ ಪ್ರಕರಣದಲ್ಲಿ ತನ್ನ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೆ ನಟರಾಜನ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಪೀಠ ತನ್ನ ಆದೇಶದಲ್ಲಿ, ಸಿಆರ್‌ಪಿಸಿ ಸೆಕ್ಷನ್ 468(2)(ಸಿ) ಪ್ರಕಾರ ಕೃತ್ಯ ಅಸಂಜ್ಞೆಯ ಅಪರಾಧವಾಗಿದ್ದು, ಒಂದು ವರ್ಷದಿಂದ ಮೂರು ವರ್ಷದ ಅವಧಿಗೆ ಜೈಲು ಶಿಕ್ಷೆ ವಿಧಿಸಬಹುದಾಗಿದ್ದರೆ ಅಂತಹ ಸಂದರ್ಭದಲ್ಲಿ ಪ್ರಕರಣ ದಾಖಲಾಗಿ ಮೂರು ವರ್ಷದೊಳಗೆ ವಿಚಾರಣೆಗೆ ತೆಗೆದುಕೊಳ್ಳಬೇಕು. ಮೂರು ವರ್ಷಗಳ ನಂತರ ವಿಚಾರಣೆಗೆ ತೆಗೆದು ಕೊಳ್ಳುವುದಕ್ಕೆ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ನಿರ್ಬಂಧವಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಪ್ರಕರಣವೇನು?
ಮೈಸೂರಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ 2016ರಲ್ಲಿ ಪಿಎಸ್‌ಐ ಆಗಿದ್ದ ಯಶವಂತಕುಮಾರ್ ಸೇವೆಯಿಂದ ಅಮಾನತುಗೊಂಡಿದ್ದರು. ಇದರಿಂದ ಅಂದಿನ ಕೆ.ಆರ್.ಪೇಟೆ ಟೌನ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಸಂತೋಷ್‌ಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.
ಬಳಿಕ 2016ರ ಜೂ.6ರಂದು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿತ್ತು. ಪ್ರಕರಣದ ತನಿಖೆ ನಡೆಸಲು ಕೆ.ಆರ್.ಪೇಟೆ ಜೆಎಂಎಫ್‌ಸಿ ಕೋರ್ಟ್ (ಮ್ಯಾಜಿಸ್ಟ್ರೇಟ್ ನ್ಯಾಯಾಲಯ) ಅನುಮತಿ ನೀಡಿತ್ತು. ನಾಲ್ಕು ವರ್ಷ ಕಳೆದ ನಂತರ ಮ್ಯಾಜಿಸ್ಟ್ರೇಟ್ ಕೋರ್ಟ್ 2020ರ ಆ.3ರಂದು ಪೊಲೀಸರ ತನಿಖೆಗೆ ಅನುಮತಿ ನೀಡಿರುವ ಕ್ರಮ ಪ್ರಶ್ನಿಸಿ ಯಶವಂತ್ ಹೈಕೋರ್ಟ್ ಮೆಟ್ಟಿಲೇರಿದ್ದರು.