ಬೆಂಗಳೂರು: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ನೀಡಿದ ಸಮನ್ಸ್ ರದ್ದು ಕೋರಿ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಬೆನ್ನಲ್ಲೇ ಮತ್ತೆ ಅಧಿಕಾರಿಗಳು ಮಾಜಿ ಸಚಿವ ಡಿ.ಕೆ.ಶಿವಕುಮಾರ್ಗೆ ಸಮನ್ಸ್ ಜಾರಿಗೊಳಿಸಿದ್ದಾರೆ.
ನಿನ್ನೆ ರಾತ್ರಿ (ಗುರುವಾರ) 10ಕ್ಕೆ ನಾಲ್ವರು ಇಡಿ ಅಧಿಕಾರಿಗಳು ಸದಾಶಿವನಗರದಲ್ಲಿರುವ ಡಿಕೆಶಿ ನಿವಾಸಕ್ಕೆ ಆಗಮಿಸಿ ವಿಚಾರಣೆಗೆ ಹಾಜರಾಗುವಂತೆ ಡಿ.ಕೆ.ಶಿವಕುಮಾರ್ಗೆ ಸೂಚಿಸಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಎಲ್ಲರೂ (ಮಾಧ್ಯಮ) ಚೆನ್ನಾಗಿ ವ್ಯಾಖ್ಯಾನ ಮಾಡ್ತಿದ್ದೀರಿ. ಏನು ವ್ಯಾಖ್ಯಾನ ಮಾಡ್ತಿರೋ ಮಾಡಿ. ಸುದ್ದಿಗೋಷ್ಠಿ ಕರೆದು ಎಲ್ಲವನ್ನೂ ಮಾತಾಡುತ್ತೇನೆ ಎಂದು ಕಿಡಿಕಾರಿದರು.
ವಕೀಲರನ್ನ ಭೇಟಿ ಮಾಡಿದ್ದೀರಾ? ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, 'ನೀನೇನು ನನ್ನ ವಕೀಲನಾ ಏನಪ್ಪ' ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ನಿರ್ಗಮಿಸಿದರು.
ಸಮನ್ಸ್ ಜಾರಿ ಮಾಡುತ್ತಿದ್ದಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿದ ಡಿ.ಕೆ.ಶಿವಕುಮಾರ್, ಈ ಬಗ್ಗೆ ಚರ್ಚಿಸಿದ್ದಾರೆ. ನಂತರ ಖಾಸಗಿ ಹೋಟೆಲ್ನಲ್ಲಿ ಕಾನೂನು ತಜ್ಞರನ್ನು ಸಂಪರ್ಕಿಸಿ ತಮ್ಮ ಸ್ವಕ್ಷೇತ್ರ ಕನಕಪುರಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ಬಂಧನ ಭೀತಿಯಲ್ಲಿ ಡಿಕೆಶಿ?:
ವಿಚಾರಣೆಗೆ ಕರೆಸಿ ಇಡಿ ತಮ್ಮನ್ನ ವಶಕ್ಕೆ ಪಡೆಯಬಹುದಾ ಅಥವಾ ಬಂಧಿಸಲಿದೆಯಾ ಎಂದು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಹೇಳಲಾಗಿದೆ.