ಬೆಂಗಳೂರು: ಕೋವಿಡ್ ಲಸಿಕೆ ಕೊರತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ನೇರ ಹೊಣೆ ಎಂದಿರುವ ಹೈಕೋರ್ಟ್ ಲಸಿಕೆ ಲಭ್ಯತೆ ಬಗ್ಗೆ ಸಾರ್ವಜನಿಕರಿಗೆ ವಾಸ್ತವಾಂಶ ತಿಳಿಸಲು ಶ್ವೇತಪತ್ರ ಹೊರಡಿಸಿ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ರಾಜ್ಯದಲ್ಲಿ ಮೊದಲನೇ ಡೋಸ್ ಕೊವ್ಯಾಕ್ಸಿನ್ ಲಸಿಕೆ ಪಡೆದಿರುವ ಅರ್ಧದಷ್ಟು ಜನರು ಇದೀಗ ಎರಡನೇ ಡೋಸ್ನಿಂದ ವಂಚಿತರಾಗುವ ಸ್ಥಿತಿಯಲ್ಲಿದ್ದಾರೆ. ಇದು ಅತ್ಯಂತ ಗಂಭೀರ ಸಂಗತಿ. ಇದೀಗ ಗ್ರಾಮೀಣ ಪ್ರದೇಶದಲ್ಲೂ ಸೋಂಕು ಹರಡುತ್ತಿರುವುದು ಆತಂಕದ ವಿಚಾರ ಎಂದಿತು.
ಸದ್ಯ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಮೊದಲನೇ ಡೋಸ್ ಲಸಿಕೆ ನೀಡಲಾಗುತ್ತಿದೆ. ಉಳಿದವರಿಗೆ ಯಾವಾಗ ಲಸಿಕೆ ನೀಡುತ್ತೀರಾ? ಅದಕ್ಕೆ ಸರ್ಕಾರದ ಬಳಿ ನೀಲನಕ್ಷೆ ಇದೆಯೇ ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಅಡ್ವೊಕೇಟ್ ಜನರಲ್, ಸರ್ಕಾರ ಲಸಿಕೆ ಖರೀದಿಗೆ ವ್ಯಾಪಕ ಪ್ರಯತ್ನ ಮಾಡುತ್ತಿದೆ. ಸದ್ಯಕ್ಕೆ ಯಾವುದೇ ನೀತಿ ಇಲ್ಲ. ಮುಂದಿನ ದಿನಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸತ್ಯ ಒಪ್ಪಿಕ್ಕೊಳ್ಳಿ ರಾಜ್ಯದಲ್ಲಿ ಲಸಿಕೆ ಕೊರತೆ ಇದೆ. ಸದ್ಯ ಎಲ್ಲರಿಗೂ ಲಸಿಕೆ ನೀಡಲಾಗದು, ಜನರು ಅನಗತ್ಯವಾಗಿ ಲಸಿಕೆ ಕೇಂದ್ರಗಳಿಗೆ ಬರಬೇಡಿ ಎಂಬ ಸತ್ಯಾಂಶವನ್ನು ಜನರ ಮುಂದೆ ಹೋಗಿ ಒಪ್ಪಿಕೊಳ್ಳಿ. ಆ ಕುರಿತು ತಪ್ಪು ಹೇಳಿಕೆಗಳನ್ನು ನೀಡುವ ಬದಲು ವಾಸ್ತವಾಂಶಗಳನ್ನು ಒಳಗೊಂಡ ಶ್ವೇತಪತ್ರ ಪ್ರಕಟಿಸಿ ಎಂದು ಸರ್ಕಾರಕ್ಕೆ ನಿರ್ದೇಶಿಸಿತು.
ಅಲ್ಲದೇ, ಮೇ 16ರ ವರೆಗಿನ ಅಂಕಿ-ಅಂಶಗಳನ್ನು ಗಮನಿಸಿದರೆ, ಸುಮಾರು 58,34,050 ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆ ನೀಡಬೇಕಾಗುತ್ತದೆ. ರಾಜ್ಯ ಸರಕಾರದ ಮಾಹಿತಿಯಂತೆ 4.5 ಲಕ್ಷ ಮಂದಿಗೆ ಕೊವ್ಯಾಕ್ಸಿನ್ ನೀಡಬೇಕಿದೆ. ಆದರೆ, ಸರ್ಕಾರದ ಬಳಿ ಕೇವಲ 97 ಸಾವಿರ ಡೋಸ್ ಇದೆ. ಈ ಕೊರತೆಯನ್ನು ಹೇಗೆ ಸರಿಪಡಿಸುತ್ತೀರಿ ಎಂದು ತರಾಟೆಗೆ ತೆಗೆದುಕೊಂಡಿತು.
ಬಳಿಕ ಲಸಿಕೆ ಕೊರತೆ ನೀಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಮೊದಲ ಡೋಸ್ ಪಡೆದಿರುವ ಯಾರೊಬ್ಬರೂ ಎರಡನೇ ಡೋಸ್ ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಈ ಕುರಿತು ಮುಂದಿನ ಮಂಗಳವಾರದೊಳಗೆ ಕ್ರಮಗಳನ್ನು ಕೈಗೊಂಡು ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆ ಮುಂದೂಡಿತು.