ಬೆಂಗಳೂರು: ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಡಿ ಕೆ ಶಿವಕುಮಾರ್ ಹಾಗೂ ಡಾ.ಜಿ ಪರಮೇಶ್ವರ್ ಅವರ ವಿರುದ್ಧ ಐಟಿ ದಾಳಿ ನಡೆದ ನಂತರ ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ನಡುಕ ಶುರುವಾಗಿದೆ.
ಈ ಹಿಂದಿನ ಸರ್ಕಾರಗಳಲ್ಲಿ ಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದವರು, ಪ್ರಮುಖ ಖಾತೆಗಳನ್ನು ಹೊಂದಿದವರು, ಅಧಿಕಾರದ ನಡುಮನೆಯಲ್ಲಿ ಪ್ರಭಾವಿಗಳಾಗಿದ್ದ ಅನೇಕರ ಮೇಲೆ ಐಟಿ ಕಣ್ಣಿಟ್ಟಿದ್ದು, ಅದರ ಕಣ್ಣಿಗೆ ತಾವೂ ಬಿದ್ದಿರಬಹುದು ಎಂದು ಕಾಂಗ್ರೆಸ್ನ ಹಲವು ನಾಯಕರು ಗಾಬರಿಗೊಂಡಿದ್ದಾರೆ ಎನ್ನಲಾಗಿದೆ.
ಕೆಲ ನಾಯಕರಿಗೆ ಈಗಾಗಲೇ ಐಟಿ ನೋಟಿಸ್ ತಲುಪಿದ್ದು, ಇಂತಿಂತಹ ವ್ಯವಹಾರಗಳಿಗೆ ಸಂಬಂಧಿಸಿದಂತೆ ನೀವು ಆದಾಯ ತೆರಿಗೆ ಘೋಷಣೆ ಪತ್ರದಲ್ಲಿ ಏನನ್ನೂ ಹೇಳಿಲ್ಲ. ಯಾವ ಕಾರಣಕ್ಕಾಗಿ ಈ ಕುರಿತು ಮಾಹಿತಿ ನೀಡಿಲ್ಲ? ಇದರ ವಹಿವಾಟಿನ ವಿವರಗಳ ಬಗ್ಗೆ ನಿಮ್ಮ ಬಳಿ ಇರುವ ದಾಖಲೆಗಳನ್ನು ಒದಗಿಸಿ ಎಂದು ಐಟಿ ಇಲಾಖೆ ಸೂಚಿಸಿದೆ ಎನ್ನಲಾಗಿದೆ. ದಾಖಲೆಗಳ ಸಮೇತ ಐಟಿ ತಮಗೆ ನೀಡಿರುವ ನೋಟಿಸ್ಗಳಿಗೆ ಉತ್ತರಿಸುವುದು ಹೇಗೆ?, ಐಟಿ ಕುಣಿಕೆಯಿಂದ ಬಚಾವಾಗುವುದು ಹೇಗೆ? ಅನ್ನುವುದೇ ಈಗ ಕೈ ನಾಯಕರ ಚಿಂತೆಯಾಗಿದೆ.
ಮೂಲಗಳ ಪ್ರಕಾರ, ಹಿಂದೆ ರಾಜಧಾನಿ ಬೆಂಗಳೂರಿನ ಕೆಆರ್‌ಪುರಂ ಸೇತುವೆ ಬಳಿ ಎರಡು ಟ್ರಕ್ ಭರ್ತಿ ಹೊಸ ನೋಟುಗಳು ಸಿಕ್ಕ ಪ್ರಕರಣ ಹೇಗೋ ಮುಚ್ಚಿ ಹೋಗಿತ್ತು. ಪ್ರತ್ಯಕ್ಷದರ್ಶಿಗಳು ಇದ್ದರೂ ಅಂತಹ ಘಟನೆ ನಡೆದೇ ಇಲ್ಲ ಎಂದು ಹೇಳಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಐಟಿ ಇಲಾಖೆ ಹಲವರ ಬಳಿ ಮಾಹಿತಿ ಸಂಗ್ರಹಿಸಿ ಅದರ ಒಳಸುಳಿಗಳನ್ನು ಬಿಡಿಸತೊಡಗಿದ್ದು, ಆ ಪ್ರಕರಣ ಹಲವರ ಪಾಲಿಗೆ ಉರುಳಾಗುವ ಸಾಧ್ಯತೆಯೇ ಹೆಚ್ಚು ಎಂದು ಹೇಳಲಾಗಿದೆ.
50 ಕೋಟಿ ರೂ.ಗೂ ಮೀರಿದ ಹಣದ ವಹಿವಾಟು ಮಾಡಿರುವ ಪ್ರಕರಣಗಳು, ಆ ಕುರಿತು ನಿಯಮ ಪಾಲನೆಯಾಗಿಲ್ಲ ಎಂಬ ಮಾಹಿತಿ ಆಧಾರದ ಮೇಲೆ ಐಟಿ, ಕೈ ಪಾಳೆಯದ ಹಲವು ನಾಯಕರ ಮೇಲೆ ಕಣ್ಣಿಟ್ಟಿದ್ದು, ಈ ಅಂಶ ಸಹಜವಾಗಿಯೇ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ. ಈಗಾಗಲೇ ಐಟಿ ಕೈಗೆ ಸಿಕ್ಕಿ ಬಿದ್ದಿರುವ ನಾಯಕರೊಬ್ಬರ ಜತೆ ವಹಿವಾಟು ನಡೆಸಿದ ರಾಜ್ಯಸಭಾ ಸದಸ್ಯರೊಬ್ಬರ ಬಗ್ಗೆ ಐಟಿ ತನಿಖೆ ಆರಂಭಿಸಿದ್ದು, ಗಾಬರಿಗೊಂಡಿರುವ ಈ ರಾಜ್ಯಸಭಾ ಸದಸ್ಯರು ತಮ್ಮನ್ನು ಹೇಗಾದರೂ ಬಚಾವು ಮಾಡಿ ಎಂದು ಪ್ರಭಾವಿಗಳ ಮೊರೆ ಹೋಗಿದ್ದಾರೆ ಎನ್ನಲಾಗಿದೆ.