ಲೆಕ್ಕಪತ್ರ ಇಲಾಖೆ ಸಹಾಯಕ ನಿಯಂತ್ರಕ ಹುದ್ದೆ ನೇಮಕಾತಿಯಲ್ಲಿಯೂ ಅಕ್ರಮ: ಪೊಲೀಸ್ ಕಮೀಷನರ್ಗೆ ದೂರು - ಲೆಕ್ಕಪರಿಶೋಧನೆ ಹಾಗೂ ಲೆಕ್ಕಪತ್ರ ಇಲಾಖೆಯ ಸಹಾಯಕ ನಿಯಂತ್ರಕ ಹುದ್ದೆಯಲ್ಲಿ ಅಕ್ರಮ
ಕೆಪಿಎಸ್ಸಿ ನಡೆಸಿರುವ ಲೆಕ್ಕಪರಿಶೋಧನೆ ಹಾಗೂ ಲೆಕ್ಕಪತ್ರ ಇಲಾಖೆಯ ಸಹಾಯಕ ನಿಯಂತ್ರಕ ಹುದ್ದೆಯ ಸಂದರ್ಶನದಲ್ಲಿ ಅಕ್ರಮ ನಡೆದಿದೆ ಎಂದು ಅಭ್ಯರ್ಥಿಯೊಬ್ಬರು ಪೊಲೀಸ್ ಕಮೀಷನರ್ ಕಮಲ್ಪಂತ್ಗೆ ದೂರು ನೀಡಿದ್ದಾರೆ.
ಬೆಂಗಳೂರು: ಪಿಎಸ್ಐ ಪರೀಕ್ಷಾ ನೇಮಕಾತಿಯಲ್ಲಿ ಅಕ್ರಮ ಹೊರಬೀಳುತ್ತಿದ್ದಂತೆ ಲೊಕೋಪಯೋಗಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಕ್ರಮ ಕೇಳಿಬಂದಿತ್ತು. ಇದೀಗ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸಿದ ರಾಜ್ಯ ಲೆಕ್ಕಪರಿಶೋಧನೆ ಹಾಗೂ ಲೆಕ್ಕಪತ್ರ ಇಲಾಖೆಯ ಸಹಾಯಕ ನಿಯಂತ್ರಕ ಹುದ್ದೆಗಳಲ್ಲಿ ನಡೆದ ಸಂದರ್ಶನದಲ್ಲಿ ಅಕ್ರಮದ ಬಗ್ಗೆ ಸುದ್ದಿ ಕೇಳಿಬಂದಿದೆ.
ಸಂದರ್ಶನಕ್ಕೂ ಮುನ್ನ ಕೆಪಿಎಸ್ಸಿ ಸದಸ್ಯರ ಕಡೆಯವರು ಎಂದು ವಿನಯ್ ಎಂಬಾತ ಕರೆ ಮಾಡಿ ಪರೋಕ್ಷವಾಗಿ ಡೀಲ್ ಬಗ್ಗೆ ಮಾತುಕತೆ ನಡೆಸಿದ್ದಾನೆ. ಇಷ್ಟೇ ಅಲ್ಲದೆ ನೇಮಕವಾದ ಅಭ್ಯರ್ಥಿಗಳು ಅಕ್ರಮ ಎಸಗಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಸಬೇಕೆಂದು ಕೋರಿ ವಿನ್ಸೆಂಟ್ ರೊಡ್ರಿಗ್ಸ್ ಎಂಬುವರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಲೆಕ್ಕಪರಿಶೋಧನೆ ಹಾಗೂ ಲೆಕ್ಕಪತ್ರ ಇಲಾಖೆಯ ಸಹಾಯಕ ನಿಯಂತ್ರಕ ಹುದ್ದೆಗಳಿಗಾಗಿ 2020ರಲ್ಲಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಇದರಂತೆ ಪರೀಕ್ಷೆ ನಡೆದು 2022ರ ಏಪ್ರಿಲ್ 22 ರಂದು ಸಂದರ್ಶನಕ್ಕೆ ಕರೆದಿತ್ತು. ಸಂದರ್ಶನಕ್ಕೂ ಕೆಲ ದಿನಗಳ ಹಿಂದೆ ಕೆಪಿಎಸ್ಸಿ ಸದಸ್ಯರ ಕಡೆಯಿಂದ ಎಂದು ಕರೆ ಮಾಡಿದ್ದ ವಿನಯ್ ಎಂಬಾತ ನಿಯಂತ್ರಕ ಹುದ್ದೆಗಳಿಗೆ ಡೀಲ್ ನಡೆಯುತ್ತಿದ್ದು, ನೀವೂ ಎಷ್ಟು ಹಣ ಹೊಂದಿಸುತ್ತೀರಾ ಎಂದು ಕೇಳಿರುವುದಾಗಿ ವಿನ್ಸಂಟ್ ಆರೋಪಿಸಿದ್ದಾರೆ.
ನನಗೆ ಮಾತ್ರವಲ್ಲ ಕೆಲ ಆಭ್ಯರ್ಥಿಗಳೊಂದಿಗೆ ಸಂಪರ್ಕ ಸಾಧಿಸಿರುವ ಗುಮಾನಿಯಿದೆ. ಸದ್ಯ 54 ಆಭ್ಯರ್ಥಿಗಳು ನೇಮಕಾತಿಯಾಗಿದ್ದಾರೆ. ಈ ಪೈಕಿ ಕೆಲ ಅಭ್ಯರ್ಥಿಗಳು ಅಕ್ರಮ ಎಸಗಿರುವ ಅನುಮಾನವಿದೆ. ಒಟ್ಟಾರೆ ಪರೀಕ್ಷಾ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ಕೇಳಿ ಬಂದಿದ್ದು ಈ ಸಂಬಂಧ ತನಿಖೆ ನಡೆಸುವಂತೆ ಪೊಲೀಸ್ ಕಮೀಷನರ್ ಕಮಲ್ಪಂತ್ಗೆ ಅಭ್ಯರ್ಥಿ ವಿನ್ಸಂಟ್ ದೂರು ನೀಡಿದ್ದಾರೆ.
ಇದನ್ನೂ ಓದಿ: ಒಬಿಸಿ ಮೀಸಲು ಇಲ್ಲದೇ ಬಿಬಿಎಂಪಿ ಸೇರಿ ಯಾವುದೇ ಸ್ಥಳೀಯ ಸಂಸ್ಥೆ ಚುನಾವಣೆ ಮಾಡುವುದಿಲ್ಲ: ಮಾಧುಸ್ವಾಮಿ