ಬೆಂಗಳೂರು: ಐಎಂಎ ವಂಚನೆ ಪ್ರಕರಣದಲ್ಲಿ ತಮ್ಮ ವಿರುದ್ಧ ಸಿಬಿಐ ದಾಖಲಿಸಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಸಂಬಂಧ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ವಿಚಾರಣೆ ನಡೆಸಿ, ರಾಜ್ಯ ಸರ್ಕಾರ ಹಾಗೂ ಸಿಬಿಐಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಡಿ.15ಕ್ಕೆ ಮುಂದೂಡಿದೆ.
ಓದಿ-ಐಎಂಎ ಪ್ರಕರಣ: 2ನೇ ಬಾರಿ ಸಿಬಿಐ ವಿಚಾರಣೆಗೆ ಹಾಜರಾದ ಹೇಮಂತ್ ನಿಂಬಾಳ್ಕರ್
ಪ್ರಕರಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಪಾತ್ರವಿದ್ದು, ಅವರ ವಿರುದ್ಧವೂ ತನಿಖೆ ನಡೆಸಲು ಅನುಮತಿ ಕೋರಿ ಸಿಬಿಐ ಸರ್ಕಾರಕ್ಕೆ ಮನವಿ ಮಾಡಿತ್ತು. ಅದರಂತೆ ಸರ್ಕಾರ 2020ರ ಸೆಪ್ಟೆಂಬರ್ 9ರಂದು ತನಿಖೆಗೆ ಅನುಮತಿ ನೀಡಿ ಆದೇಶ ಹೊರಡಿಸಿತ್ತು. ಬಳಿಕ ಸಿಬಿಐ ಪ್ರಕರಣ ದಾಖಲಿಸಿ ವಿಶೇಷ ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿ ಸಲ್ಲಿಸಿದೆ.
ಈ ಹಿನ್ನೆಲೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ತಮ್ಮ ವಿರುದ್ಧ ತನಿಖೆ ನಡೆಸಲು ಸಿಬಿಐಗೆ ಅನುಮತಿ ನೀಡಿ ಹೊರಡಿಸಿರುವ ಆದೇಶ ಹಾಗೂ ಸಿಬಿಐ ದಾಖಲಿಸಿರುವ ಎಫ್ಐಆರ್ ಮತ್ತು ವಿಶೇಷ ನ್ಯಾಯಾಲಯದ ವಿಚಾರಣೆಯನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ಹಿನ್ನೆಲೆ
ಐಎಂಎ ವಂಚನೆ ಹಗರಣದ ಸಂಬಂಧ ದೂರುಗಳು ದಾಖಲಾಗುವ ಸಂದರ್ಭದಲ್ಲಿ ಸಿಐಡಿಯ ಆರ್ಥಿಕ ಅಪರಾಧ ತನಿಖಾ ವಿಭಾಗದ ಮುಖ್ಯಸ್ಥರಾಗಿ (ಐಜಿಪಿ) ಹೇಮಂತ್ ನಿಂಬಾಳ್ಕರ್ ಕಾರ್ಯ ನಿರ್ವಹಿಸುತ್ತಿದ್ದರು. ಈ ವೇಳೆ, ನಿಂಬಾಳ್ಕರ್ ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ. ಜತೆಗೆ ಆರೋಪಿಗಳಿಗೆ ಪೂರಕವಾಗಿ ಕೆಲಸ ಮಾಡಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು.