ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ತೊಡಗಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಶ್ರೀಧರ್ ಎಂದು ಗುರುತಿಸಲಾಗಿದೆ. ಬಂಧಿತನಿಂದ 2.5 ಲಕ್ಷ ರೂಪಾಯಿ ನಗದು ಹಾಗು ಮೊಬೈಲ್ ಫೋನ್ ಅನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಗರದ ಮಾಗಡಿ ರಸ್ತೆಯ ಅಗ್ರಹಾರದ 5ನೇ ಕ್ರಾಸ್ ನಲ್ಲಿ, ಐಪಿಎಲ್ ಟಿ20 ಕ್ರಿಕೆಟ್ ಸರಣಿಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ರೈಸರ್ಸ್ ಹೈದ್ರಾಬಾದ್ ತಂಡಗಳ ನಡುವೆ ನಡೆಯುತ್ತಿದ್ದ ಪಂದ್ಯಕ್ಕೆ ಕ್ರಿಕೆಟ್ ಬೆಟ್ಟಿಂಗ್ ಪಡೆಯಲು ಸಜ್ಜಾಗಿದ್ದ ವೇಳೆ ಸಿಸಿಬಿ ಬಂಧಿಸಿದೆ.
ತಂಡಗಳ ಸೋಲು ಮತ್ತು ಗೆಲುವಿನ ಬಗ್ಗೆ ಟೆನೆಕ್ಟ್ ಎನ್ನುವ ಆನ್ಲೈನ್ ವೆಬ್ ಸೈಟ್ ಮೂಲಕ ಬೆಟ್ಟಿಂಗ್ ರೇಶಿಯೋ ನೋಡಿಕೊಂಡು ಮೊಬೈಲ್ ಮೂಲಕ ಹಣ ಪಣವಾಗಿ ಕಟ್ಟಿಸಿಕೊಂಡು ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಎಂದು ಕೇಂದ್ರ ಅಪರಾಧ ಪತ್ತೆದಳದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಹಿಂದಿನ ಪಂದ್ಯಗಳಲ್ಲಿ ಗೆದ್ದವರಿಗೆ ಹಣ ಕೊಡಲು ಹಾಗೂ ಸೋತವರಿಂದ ಹಣ ಪಡೆಯಲು ಬಂದ ಖಚಿತ ಮಾಹಿತಿಯನ್ನು ಆಧರಿಸಿ, ಕೇಂದ್ರ ಅಪರಾಧ ವಿಭಾಗದ ವಿಶೇಷ ವಿಚಾರಣಾ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಜೂಜಾಟದಲ್ಲಿ ತೊಡಗಿದ್ದ ಶ್ರೀಧರ್ ನನ್ನು ವಶಕ್ಕೆ ಪಡೆದಿದ್ದಾರೆ.
ಸದ್ಯ ಆರೋಪಿಯ ವಿರುದ್ಧ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಓದಿ : ಜೆಎನ್‌ಯು ಗಲಾಟೆ ಪ್ರಕರಣ: ಎಫ್‌ಐಆರ್ ದಾಖಲಿಸಿಕೊಂಡ ದೆಹಲಿ ಪೊಲೀಸ್