ದೊಡ್ಡಬಳ್ಳಾಪುರ : ಐಪಿಎಲ್ ಬೆಟ್ಟಿಂಗ್ ಹಿನ್ನೆಲೆ ಹಣಕಾಸಿನ ವಿಚಾರಕ್ಕೆ ನಡೆದ ಜಗಳದಲ್ಲಿ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದ ಘಟನೆ ತಾಲೂಕಿನ ಬಾಶೆಟ್ಟಿಹಳ್ಳಿ ಗ್ರಾಮದ ಜನತಾ ಕಾಲೋನಿಯಲ್ಲಿ ನಡೆದಿದೆ.
ಸಂಜಯ್ ಕುಮಾರ್ (34) ಮೃತ ವ್ಯಕ್ತಿ. ಇಂದು ಮುಂಜಾನೆ 3 ಗಂಟೆಯ ಸಮಯದಲ್ಲಿ ಸಂಜಯ್ ಕುಮಾರ್ ನಿವಾಸಕ್ಕೆ ಬಂದ ಅಪರಿಚಿತ ವ್ಯಕ್ತಿ ಚಾಕುವಿನಿಂದ ಕೈ ಮತ್ತು ಹೊಟ್ಟೆಗೆ ಬಲವಾಗಿ ಇರಿದು ಪರಾರಿಯಾಗಿದ್ದಾನೆ.
ಮೆಟ್ಟಿಲುಗಳ ಮೇಲೆ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವ್ಯಕ್ತಿಯ ನರಳಾಟ ಕೇಳಿ ಬಂದ ಪಕ್ಕದ ಮನೆಯವರು ಆತನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ತೀವ್ರ ರಕ್ತಸ್ರಾವದಿಂದ ದಾರಿ ಮಧ್ಯೆ ಮೃತ ಪಟ್ಟಿದ್ದಾನೆ.
ಘಟನೆಯ ವಿವರ:
ಮೃತ ವ್ಯಕ್ತಿ ಹರಿಯಾಣ ಮೂಲದವನಾಗಿದ್ದು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಟಾಫೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಬಾಶೆಟ್ಟಿಹಳ್ಳಿಯ ಜನತಾ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ. ಐಪಿಎಲ್ ಬೆಟ್ಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಸಂಜಯ್ ಕುಮಾರ್ ಮತ್ತು ಅಪರಿಚಿತ ವ್ಯಕ್ತಿಯ ನಡುವೆ ಜಗಳವಾಗಿದೆ. ಈ ಜಗಳವೇ ಕೊಲೆಗೆ ಕಾರಣವಾಗಿದೆ ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸುತ್ತಾರೆ.
ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.