ಬೆಂಗಳೂರು: ಡಿಜೆಹಳ್ಳಿ ಗಲಭೆ ಪ್ರಕರಣದ ಆರೋಪಿಗಳು ಸದ್ಯ ಪೊಲೀಸರಿಗೆ ತಲೆನೋವಾಗಿದ್ದಾರೆ. ತನಿಖಾಧಿಕಾಧಿಕಾರಿಗಳ ದಾರಿ ತಪ್ಪಿಸಲು 13 ಆರೋಪಿಗಳು ನ್ಯಾಯಾಲಯಕ್ಕೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ, ಅದರಲ್ಲಿ 9 ಜನರ ಅರ್ಜಿ ತಿರಸ್ಕೃತವಾಗಿವೆ.
ತನಿಖಾಧಿಕಾರಿಗಳ ದಿಕ್ಕು ತಪ್ಪಿಸೋದಕ್ಕೆ ಮಾಸ್ಟರ್ ಪ್ಲಾನ್ : ಗಲಭೆ ನಡೆಯುವ ಮುಂಚೆಯೇ ಪ್ಲಾನ್ ಮಾಡಿದ್ದ ಆರೋಪಿಗಳು ಕುಟುಂಬಸ್ಥರನ್ನ ಮುಂದೆ ಬಿಡಲು ನಿರ್ಧರಿಸಿದ್ದರು. ಹೀಗಾಗಿ, ತನಿಖಾಧಿಕಾರಿಗಳಿಗೆ ಕಾನೂನಿನ ಮೂಲಕ ಅಡ್ಡಿಪಡಿಸುವ ತಂತ್ರ ಮಾಡಿ ನ್ಯಾಯಾಲಯ, ಮಾನವ ಹಕ್ಕು ಆಯೋಗ, ಮಹಿಳಾ ಆಯೋಗದ ಮೊರೆ ಹೋಗಿ ಪೊಲೀಸರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ.
ಇದಕ್ಕೆ ಸರಿಯಾಗಿ ಠಕ್ಕರ್ ಕೊಡೋಕೆ ಮುಂದಾದ ಸಿಸಿಬಿ ಪೊಲೀಸರು ಪ್ರಸ್ತುತ ನಾಲ್ಕು ಟೀಂ ರೆಡಿ ಮಾಡಿದ್ದಾರೆ. ಒಂದು ಟೀಂ ನ್ಯಾಯಾಲಯ, ಮತ್ತೊಂದು ಟೀಂ ಮಾನವ ಹಕ್ಕುಗಳ ಆಯೋಗ, ಮಗದೊಂದು ಟೀಂ ಮಹಿಳಾ ಆಯೋಗ, ಇನ್ನೊಂದು ಟೀಂ ಹೈಕೋರ್ಟ್ನ ಕೆಲಸ ನಿರ್ವಹಣೆ ಮಾಡ್ತಿದೆ.
ಆರೋಪಿಗಳು ಹಾಕುವ ಪ್ರತಿ ಜಾಮೀನು ಅರ್ಜಿಗೂ ಅಧಿಕಾರಿಗಳು ಉತ್ತರಿಸಬೇಕಾಗಿದೆ. 9 ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಪ್ರಕರಣ ತನಿಖಾ ಹಂತದಲ್ಲಿದ್ದು, ಈಗಾಗಲೇ 300ಕ್ಕೂ ಹೆಚ್ಚು ಆರೋಪಿಗಳನ್ನ ಬಂಧಿಸಲಾಗಿದೆ.
ಬಂಧಿಸ್ದವರ ವಿಚಾರಣೆ ನಡೆಸಬೇಕು. ಆದರೆ, ಈ ರೀತಿ ನ್ಯಾಯಾಲಯಕ್ಕೇ ಓಡಾಡುತ್ತಿದ್ದರೆ ಆಗುವುದಿಲ್ಲ. ದಯಮಾಡಿ ಆರೋಪಿಗಳಿಗೆ ಜಾಮೀನು ನೀಡದಂತೆ ಕೋರ್ಟ್ಗೆ ಮನವಿ ಮಾಡಲು ಸಿಸಿಬಿ ಹಿರಿಯ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಈ ತಿಂಗಳ 11ರಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರ ಬಳಿ ಡಿಜೆಹಳ್ಳಿ ಗಲಭೆ ಪ್ರಕರಣ ಬರಲಿದೆ. ಅಂದು ಸಿಸಿಬಿ ಅಧಿಕಾರಿಗಳು ಆರೋಪಿಗಳನ್ನು ಸಾಕ್ಷಿ ಸಮೇತ ನ್ಯಾಯಾಲಯದ ಎದುರು ಹಾಜರುಪಡಿಸಿ, ಆರೋಪಿಗಳು ಹಾಗೂ ಕುಟುಂಬಸ್ಥರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ.