ಬೆಂಗಳೂರು: ನಗರ ಯೋಜನೆ, ನಗರ ನಿರ್ಮಾಣ ಹಾಗೂ ನಗರ ಕಾನೂನುಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ವತಿಯಿಂದ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ನಿನ್ನೆ ಆಯೋಜಿಸಿದ ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ಸೆಂಟರ್ ಆಫ್ ಎಕ್ಸಲೆನ್ಸ್ ಬಿಲ್ಡಿಂಗ್ನ ಭೂಮಿ ಪೂಜಾ ಕಾರ್ಯ ನೆರವೇರಿಸಿ ಮಾತನಾಡಿದ ಅವರು, ಸುಲಭ ದರದಲ್ಲಿ ಮನೆ ನಿರ್ಮಾಣ ಸಾಧ್ಯವಾದರೆ ಲಕ್ಷಾಂತರ ಜನರಿಗೆ ಸಹಾಯವಾಗುತ್ತದೆ. ಪರಿಸರ ಸ್ನೇಹಿ ಸಮುದಾಯ ಕಟ್ಟಡಗಳಿಗೆ ವಾಸ್ತುಶಿಲ್ಪಿಗಳು ಆದ್ಯತೆ ನೀಡಬೇಕು. ಪರಿಸರ ಸ್ನೇಹಿ ಚಿಂತನೆಯಾಗಬೇಕು ಎಂದರು.
ಸೃಷ್ಟಿ ಕರ್ತನ ನೈಜ ಪ್ರತಿನಿಧಿಗಳು: ವಾಸ್ತುಶಿಲ್ಪಿಗಳು ಸೃಷ್ಟಿ ಕರ್ತನ ನೈಜ ಪ್ರತಿನಿಧಿಗಳು. ಸೃಜನಶೀಲತೆ ಮನುಜನ ವಿಶಿಷ್ಟ ಗುಣ. ಬಹುಶಃ ಅದೇ ಗುಣ ಅವನನ್ನು ಇನ್ನಿತರ ಪ್ರಾಣಿಗಳಿಂದ ಭಿನ್ನವಾಗಿಸುತ್ತದೆ. ವಿವಿಧ ಸ್ತರಗಳಲ್ಲಿ ವಾಸಿಸುವ ಜನರ ಅಗತ್ಯಗಳನ್ನು ಪೂರೈಸುವ ಕೆಲಸವನ್ನು ಇಲ್ಲಿ ಮಾಡಲಾಗುತ್ತದೆ. ಪ್ರತಿಯೊಬ್ಬರಿಗೂ ಅವರದ್ದೇ ಅವಶ್ಯಕತೆಗಳಿವೆ. ಜನರ ಬೇಡಿಕೆಗಳೂ ಹೆಚ್ಚಿವೆ. ವಿಶ್ವದ ಎಲ್ಲ ವಾಸ್ತುಶಿಲ್ಪಿಗಳು ಅತ್ಯಂತ ಸುಂದರ ರಚನೆಗಳನ್ನು ಸೃಷ್ಟಿಸಿದ್ದಾರೆ ಎಂದು ಶ್ಲಾಘಿಸಿದರು.
ವಿಧಾನಸೌಧ ದೇಶದಲ್ಲಿಯೇ ಅತ್ಯುತ್ತಮ ಕಟ್ಟಡವಾಗಿದೆ. ಇನ್ನೂ 500 ವರ್ಷಗಳ ಕಾಲ ಈ ಕಟ್ಟಡ ತನ್ನ ಭವ್ಯತೆ ಉಳಿಸಿಕೊಳ್ಳಲಿದೆ. 1950 ರಲ್ಲಿ ಕಟ್ಟಲಾದ ಕಟ್ಟಡವಾದರೂ ನಿರ್ವಹಣೆ ಅತ್ಯಂತ ಸುಲಭ ಎಂದರು.
ತೃಪ್ತಿ ನೀಡುವ ವೃತ್ತಿ : ಅತ್ಯಂತ ತೃಪ್ತಿ ತಂದುಕೊಡುವ ವೃತ್ತಿ ಇದು ಎಂದು ಅಭಿಪ್ರಾಯಪಟ್ಟ ಮುಖ್ಯಮಂತ್ರಿಗಳು, ಆಧುನಿಕ ಭಾರತ ವಾಸ್ತುಶಿಲ್ಪಿಗಳಿಗೆ ಸಾಕಷ್ಟು ಅವಕಾಶಗಳನ್ನು ನೀಡುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅನೇಕ ಸ್ಮಾರಕಗಳನ್ನು ಕಟ್ಟಿದ್ದಾರೆ. ನವದೆಹಲಿಯಲ್ಲಿ ನಿರ್ಮಿಸಿರುವ ಪೊಲೀಸ್ ವಸ್ತುಸಂಗ್ರಹಾಲಯ, ವಲ್ಲಭಭಾಯಿ ಪಟೇಲರ ಪ್ರತಿಮೆ ಅತ್ಯುತ್ತಮವಾಗಿ ಮೂಡಿಬಂದಿದೆ.
ಈಗ ವಿಸ್ತಾರ್, ರಾಮಮಂದಿರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಜಲ್ ಜೀವನ್ ಮಿಷನ್ ಅಡಿ ಒಂದೇ ವರ್ಷದ ಅವಧಿಗೆ 25 ಲಕ್ಷ ಮನೆಗಳಿಗೆ ನಲ್ಲಿ ನೀರು ಒದಗಿಸಲಾಗಿದೆ. 18 ಸಾವಿರ ಮನೆಗಳಿಗೆ ವಿದ್ಯುತ್ ನೀಡಲಾಗಿದೆ. ಇವೆಲ್ಲವೂ ಆರ್ಥಿಕ ಚಟುವಟಿಕೆ ಗಳಿಗೆ ನೆರವಾಗಿದೆ ಎಂದು ಹೇಳಿದರು.
ವಾಸ್ತುಶಿಲ್ಪ ವಲಯದಲ್ಲಿ ನಾವೀನ್ಯತೆ ಸಾಧಿಸಬೇಕು: ಸೆಂಟರ್ ಆಪ್ ಎಕ್ಸಲೆನ್ಸ್ ದೇಶದ ಅತ್ಯುತ್ತಮ ಪ್ರತಿಭೆಗಳನ್ನು ಹೊರತರಲಿ. ಕರ್ನಾಟಕ ನೀತಿ ಆಯೋಗದ ನಾವೀನ್ಯತಾ ಸೂಚ್ಯಂಕದಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಂಬರ್ ಒನ್ ಸ್ಥಾನದಲ್ಲಿದೆ . ವಾಸ್ತುಶಿಲ್ಪ ವಲಯದಲ್ಲಿ ನಾವೀನ್ಯತೆ ಸಾಧಿಸಬೇಕು. ನಾವೀನ್ಯತಾ ಕ್ಷೇತ್ರದಲ್ಲಿ ವಾಸ್ತು ಶಿಲ್ಪಿಗಳಿಗೆ ನಗರದ ಯೋಜನೆ ದೊಡ್ಡ ಸವಾಲು.
ವಿವಿಧ ಆಯಾಮಗಳಲ್ಲಿ ಈ ಬಗ್ಗೆ ಯೋಚಿಸಬೇಕು. ಬಡ ಜನರಿಗೆ ಮನೆ ನಿರ್ಮಾಣ ಕೈಗೆಟುಕುವಂತಿರಬೇಕು. ಹಾಗಾಗಿ, ಅನೇಕ ಕಾನೂನುಗಳನ್ನು ಮಾರ್ಪಾಡು ಮಾಡಲಾಗಿದೆ. ಯೋಜನೆಗಳನ್ನು ಅನುಮೋದನೆ ಮಾಡಿದ ನಂತರ ಪ್ರಾರಂಭ ಪ್ರಮಾಣ ಪತ್ರ ಅಗತ್ಯ ಎಂದಿದ್ದ ಕಾನೂನು ತೆಗೆಯಲಾಗಿದೆ. ಭೂಪರಿವರ್ತನೆಯನ್ನು ಸುಲಭ ಮಾಡಲಾಗಿದೆ ಎಂದರು.
ಇದನ್ನೂ ಓದಿ: ಬಿಬಿಎಂಪಿ ಮೀಸಲಾತಿ ಪಟ್ಟಿ ಪ್ರಕಟ: ಕಾಂಗ್ರೆಸ್ ಕಾನೂನು ಹೋರಾಟ ಮಾಡಲಿ- ಸಿಎಂ