ಬೆಂಗಳೂರು: ಭಾರತದ ಏಕೈಕ ಏರ್ ಆಂಬುಲೆನ್ಸ್ ಕಂಪನಿಯಾದ ಐಸಿಎಟಿಟಿ (ಇಂಟರ್ನ್ಯಾಷನಲ್ ಕ್ರಿಟಿಕಲ್ ಏರ್ ಟ್ರಾನ್ಸ್ಫರ್ ಟೀಮ್) ಇಂದು ಮೊದಲ ಬಾರಿಗೆ ಇಂಟಿಗ್ರೇಟೆಡ್ ಏರ್ ಆಂಬುಲೆನ್ಸ್ ಸೇವೆಗಳನ್ನು ನಗರದಲ್ಲಿ ಪ್ರಾರಂಭಿಸಿದೆ.
ಇದರಿಂದ ದೂರದ ತುರ್ತು ವೈದ್ಯಕೀಯ ಸೇವೆಗಾಗಿ ಮತ್ತು ಸಮಯೋಚಿತ ಹಾಗೂ ಗುಣಮಟ್ಟದ ತುರ್ತು ವೈದ್ಯಕೀಯ ಅಗತ್ಯ ಸೇವೆಗಳನ್ನು ಪರಿಹರಿಸಿದಂತಾಗುತ್ತದೆ ಎಂದು ಐಸಿಎಟಿಟಿ ಸಹ-ಸಂಸ್ಥಾಪಕ ಮತ್ತು ನಿರ್ದೇಶಕಿ ಡಾ. ಶಾಲಿನಿ ನಾಲ್ವಾಡ್ ಹೇಳಿದರು
ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಸ್ಥಿರ ವಿಂಗ್ ಏರ್ ಆಂಬುಲೆನ್ಸ್, ದಕ್ಷಿಣ ಭಾರತದ ಮೊದಲ ಏರ್ ಆಂಬುಲೆನ್ಸ್ ಸೇವೆಯಾಗಲಿದೆ. ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗೆ ತ್ವರಿತ ಸೇವೆ ಮತ್ತು ಮೆಟ್ರೋ ನಗರಗಳಲ್ಲಿನ ಹೆಚ್ಚಿನ ರಸ್ತೆ ಸಂಚಾರದ ಸವಾಲುಗಳನ್ನು ನಿವಾರಿಸುತ್ತದೆ.
ಅತ್ಯಾಧುನಿಕ ಜರ್ಮನ್ ಐಸೊಲೇಷನ್ ಪಾಡ್‌ನೊಂದಿಗೆ ಸಜ್ಜುಗೊಂಡಿರುವ ಏರ್ ಆಂಬುಲೆನ್ಸ್ ಕೋವಿಡ್-19 ರೋಗಿಗಳಿಗೆ ಸುರಕ್ಷಿತ ಸಾರಿಗೆಯನ್ನು ಒದಗಿಸುತ್ತದೆ. ಸಮಗ್ರ ವಾಯು/ಏರ್ ಆಂಬುಲೆನ್ಸ್ ಸೇವೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಇನ್ನಿತರೆ ಸಚಿವರು ಇಂದು ಔಪಚಾರಿಕವಾಗಿ ಅನಾವರಣಗೊಳಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಏರ್ ಆಂಬುಲೆನ್ಸ್ ಸೇವೆ, ತುರ್ತು ಸಮಯದಲ್ಲಿ ಸಮಯೋಚಿತ ಮತ್ತು ತ್ವರಿತ ವೈದ್ಯಕೀಯ ಆರೈಕೆ ಮತ್ತು ಚಿಕಿತ್ಸೆ ಬಹಳ ಮಹತ್ವಕಾರಿಯಾಗಿದೆ. ಬೆಂಗಳೂರಿನಲ್ಲಿ ಏರ್ ಆಂಬುಲೆನ್ಸ್ ಸ್ಥಾಪಿಸಿರುವುದಕ್ಕೆ ಸಂತೋಷವಾಗಿದೆ ಎಂದು ತಿಳಿಸಿದರು.
ಐಸಿಎಟಿಟಿ ಸಹ-ಸಂಸ್ಥಾಪಕಿ ಮತ್ತು ನಿರ್ದೇಶಕಿ ಡಾ. ಶಾಲಿನಿ ನಾಲ್ವಾಡ್ ಮಾತನಾಡಿ, ಹೆಚ್ಚುತ್ತಿರುವ ತುರ್ತು ಪರಿಸ್ಥಿತಿಗಳಿಗೆ ಸೇವೆಗಳನ್ನು ಪೂರೈಸಲು ಭಾರತಕ್ಕೆ ಉತ್ತಮ ತುರ್ತು ವೈದ್ಯಕೀಯ ಸೇವೆಗಳ ಅಗತ್ಯವಿದೆ. ಸದ್ಯ ಅಸ್ತಿತ್ವದಲ್ಲಿರುವ, ದೆಹಲಿ ಮತ್ತು ಮುಂಬೈ ಏರ್ ಆಂಬುಲೆನ್ಸ್ ಸೇವೆಗಳು ದೇಶಾದ್ಯಂತ ವಿಭಜಿತ ಸೇವೆಗಳನ್ನು ಒದಗಿಸುತ್ತಿವೆ. ಆದ್ರೆ ಅಗತ್ಯ ಸಮಯದಲ್ಲಿ ಸೇವೆ ಪೂರೈಸುವಲ್ಲಿ ನಿಧಾನಗುತ್ತದೆ.
ಉತ್ತಮ ಆಂಬುಲೆನ್ಸ್ ಸೇವೆ ಪ್ರಗತಿಯಲ್ಲಿದ್ದರು ಕೂಡಾ ಮಹಾನಗರಗಳಲ್ಲಿ ಸಂಚಾರ ದಟ್ಟಣೆಯಿಂದಾಗಿ ಕಡಿಮೆ ಸಮಯದಲ್ಲಿ ತುರ್ತು ಸವಾಲುಗಳನ್ನು ಎದುರಿಸುವುದ ಕಷ್ಟವಾಗುತ್ತದೆ. ಸದ್ಯ ನಮ್ಮ ವೈದ್ಯಕೀಯ ಪರಿಣಿತರ ತಂಡ ಮತ್ತು ಏರ್ ಆಂಬುಲೆನ್ಸ್ ಸೇವೆ ರಾಜ್ಯದಲ್ಲಿ ಸರ್ವಕಾಲಿಕ ಉತ್ತಮ ಸೇವೆ ಒದಗಿಸುತ್ತದೆ ಎಂದು ಭರವಸೆ ನೀಡಿದರು.