ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾದ ಸಂದರ್ಭದಲ್ಲಿ ಖಾಸಗಿ ಹೋಟೆಲ್ ಹಾಗೂ ಲಾಡ್ಜ್ಗಳನ್ನು ಸೋಂಕಿತರ ಚಿಕಿತ್ಸೆಗೆ ಬಳಸಲಾಗುವುದು ಎಂದು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈಗಾಗಲೇ ಸರ್ಕಾರಿ ಕಟ್ಟಡಗಳಾದ ಜಿಲ್ಲಾಸ್ಪತ್ರೆ, ವಿವಿಧ ವಸತಿ ನಿಲಯಗಳು, ಸರ್ಕಾರಿ ಕಚೇರಿಗಳು, ಸರ್ಕಾರಿ ಭವನಗಳು ಹಾಗೂ ಕ್ರೀಡಾಂಗಣಗಳನ್ನು ಕೋವಿಡ್ 19 ಸೋಂಕಿತರು ಹೆಚ್ಚಾದ ಸಂದರ್ಭದಲ್ಲಿ ಕ್ವಾರಂಟೈನ್ ಮಾಡಲು ನಿರ್ಧರಿಸಲಾಗಿತ್ತು. ಒಂದು ವೇಳೆ ಸರ್ಕಾರಿ ಕಟ್ಟಡಗಳು ಸೋಂಕಿತರ ಚಿಕಿತ್ಸೆಗೆ ಸಾಲದಿದ್ದ ಸಂದರ್ಭದಲ್ಲಿ ಖಾಸಗಿ ಲಾಡ್ಜ್ಗಳನ್ನು ಕ್ವಾರಂಟೈನ್ಗೆ ಬಳಸಲು ಸರ್ಕಾರ ಆದೇಶ ಹೊರಡಿಸಿದೆ. ಖಾಸಗಿ ಲಾಡ್ಜ್ಗಳನ್ನು ಸರ್ಕಾರ ಬಳಕೆ ಮಾಡಿದ ಸಂದರ್ಭದಲ್ಲಿ ಅದಕ್ಕೆ ಸರ್ಕಾರವೇ ಹಣವನ್ನು ನೀಡಬೇಕು ಎಂದು ನಿಗದಿ ಮಾಡಲಾಗಿದೆ.
ಬಿಬಿಎಂಪಿ ವ್ಯಾಪ್ತಿಯ ಲಾಡ್ಜ್ಗಳಿಗೆ 900 ರೂಪಾಯಿ, ಮುನಿಸಿಪಲ್ ಕಾರ್ಪೋರೇಷನ್ ವ್ಯಾಪ್ತಿಯ ಲಾಡ್ಜ್ಗಳಿಗೆ 750 ರೂಪಾಯಿ, ಪುರಸಭೆ ವ್ಯಾಪ್ತಿಯ ಲಾಡ್ಜ್ಗಳಿಗೆ 600 ರೂಪಾಯಿ ನೀಡಿ ಕೇವಲ ಸೋಂಕಿತರ ಸಂಖ್ಯೆ ಹೆಚ್ಚಾದ ಸಂದರ್ಭದಲ್ಲಿ ಮಾತ್ರ ಸರ್ಕಾರ ಖಾಸಗಿ ಲಾಡ್ಜ್ ಬಳಸಿಕೊಳ್ಳುತ್ತದೆ.