ಬೆಂಗಳೂರು: ಸಮರ್ಥನಂ ಟ್ರಸ್ಟ್ ಸಹಭಾಗಿತ್ವದಲ್ಲಿ 3ನೇ ಇಂಡಸ್‌ಇಂಡ್ ಬ್ಯಾಂಕ್ ನಾಗೇಶ್ ಟ್ರೋಫಿ ದೃಷ್ಟಿಮಾಂದ್ಯರ ರಾಷ್ಟ್ರೀಯ ಟಿ20 ಕ್ರಿಕೆಟ್ ಟೂರ್ನಿ ಇಂದಿನಿಂದ ಆರಂಭವಾಗಿದೆ. ಬೊಮ್ಮಸಂದ್ರದ ಗೀಗಾಬೈಟ್ ಕಾನ್ಫರೆನ್ಸ್ ಸಭಾಂಗಣದಲ್ಲಿ ಆನೇಕಲ್ ಶಾಸಕ ಬಿ. ಶಿವಣ್ಣ ಟೂರ್ನಿ ಉದ್ಘಾಟಿಸಿದರು.
ಟೂರ್ನಿ ಉದ್ಘಾಟಿಸಿ ಮಾತನಾಡಿದ ಅವರು, ವಿಕಲಚೇತನರಲ್ಲಿ ವಿಶೇಷ ಪ್ರತಿಭೆಗಳಿರುತ್ತವೆ ಎನ್ನುವುದಕ್ಕೆ ಈ ಕ್ರಿಕೆಟ್ ಟೂರ್ನಮೆಂಟ್ ಸಾಕ್ಷಿ. ದೇಶದ ವಿವಿಧ ಭಾಗಗಳಲ್ಲಿರುವ ದೃಷ್ಟಿಮಾಂದ್ಯ ಕ್ರಿಕೆಟ್ ಆಟಗಾರರನ್ನು ಪ್ರೋತ್ಸಾಹಿಸಲೆಂದೇ ನಡೆಯುತ್ತಿರುವ ಈ ಟೂರ್ನಿಯನ್ನು ಉದ್ಘಾಟಿಸಲು ಸಂತಸವಾಗಿದೆ. ಪ್ರತಿಯೊಬ್ಬ ಆಟಗಾರರಿಗೂ ನನ್ನ ಅಭಿನಂದನೆಗಳು ಎಂದು ಹೇಳಿದರು.
ಬೆಂಗಳೂರಿನ ಹೊರವಲಯದಲ್ಲಿರುವ ನಿರ್ಮಾಣ್ ಗ್ರೌಂಡ್, ಸಚಿನ್ ತೆಂಡೂಲ್ಕರ್ ಗ್ರೌಂಡ್, ಅಲ್ಟಾಯರ್, ಅಥೇನಾ ಮತ್ತು ಪಿಎಸ್‌ಎ ಗ್ರೌಂಡ್‌ಗಳಲ್ಲಿ ಎರಡು ಅವಧಿಗಳಲ್ಲಿ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ಕರ್ನಾಟಕ ಮತ್ತು ಜಾರ್ಖಂಡ್ ತಂಡಗಳ ನಡುವೆ ನಡೆಯಲಿದೆ.
24 ರಾಜ್ಯಗಳಿಂದ ಆಗಮಿಸಿದ 290 ದೃಷ್ಟಿಮಾಂದ್ಯ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನಾಲ್ಕು ಗುಂಪುಗಳಲ್ಲಿ ಎಂಟು ತಂಡಗಳಿದ್ದು ಲೀಗ್ ಮತ್ತು ನಾಕೌಟ್ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಪ್ರತಿ ಗುಂಪಿನಿಂದ ಅಗ್ರಸ್ಥಾನದಲ್ಲಿರುವ ಎರಡು ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಲಿವೆ.
ಸಮರ್ಥನಂ ಟ್ರಸ್ಟ್‌ನ ಸ್ಥಾಪಕರಲ್ಲಿ ಒಬ್ಬರಾದ ದಿವಂಗತ ಎಸ್.ಪಿ. ನಾಗೇಶ್ ಅವರ ಸ್ಮರಣಾರ್ಥ ಸಿಎಬಿಐ ಮತ್ತು ಸಮರ್ಥನಂ ಟ್ರಸ್ಟ್ ಮೂರು ವರ್ಷಗಳಿಂದ ಈ ಟೂರ್ನಿ ಆಯೋಜಿಸುತ್ತಿದೆ.