ಬೆಂಗಳೂರು : ಸಾಂಕ್ರಾಮಿಕ ಕೋವಿಡ್ ಸೋಂಕಿನಿಂದ ಜನರ ಮೇಲೆ ಆದ ಪರಿಣಾಮದ ಕುರಿತು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು 9 ಸಾಮಾಜಿಕ ಸಂಘಟನೆಗಳ ಸಹಯೋಗದೊಂದಿಗೆ ರಾಜಧಾನಿ ಬೆಂಗಳೂರಿನಲ್ಲಿ ಸಮೀಕ್ಷೆ ನಡೆಸಿದೆ. ಬೆಂಗಳೂರಿನ 33 ವಾರ್ಡ್ಗಳ ವ್ಯಾಪ್ತಿಯಲ್ಲಿ ಬರುವ 92 ಕಡಿಮೆ ಆದಾಯವುಳ್ಳ ವಸತಿ ಪ್ರದೇಶಗಳಲ್ಲಿನ 3,000 ಕುಟುಂಬಗಳನ್ನು ಒಳಗೊಂಡ ಸಮೀಕ್ಷೆಯನ್ನು ಕೈಗೊಂಡಿತ್ತು.
ಸಮೀಕ್ಷೆಯ ಉದ್ದೇಶ? : ಕೋವಿಡ್-19 ಸಲುವಾಗಿ ವಿಧಿಸಲಾದ ಲಾಕ್‌ಡೌನ್‌ಗಳು, ಇದರಿಂದ ಜನರ ಉದ್ಯೋಗ ಮತ್ತು ಜೀವನೋಪಾಯಗಳ ಮೇಲೆ ಬೀರುತ್ತಿರುವ ಆರ್ಥಿಕ ದುಸ್ತರತೆಯ ಪರಿಣಾಮಗಳ ಸ್ವರೂಪವನ್ನು ಪರಿಶೀಲಿಸುವುದು ಈ ಸಮೀಕ್ಷೆಯ ಉದ್ದೇಶವಾಗಿತ್ತು. ಜತೆಗೆ, ಸರ್ಕಾರದ ನೆರವಿನ ಲಭ್ಯತೆ ಹಾಗೂ ಜನರು ಈ ಸಂಕಷ್ಟದ ಕಾಲವನ್ನು ನಿಭಾಯಿಸಿದ ವಿಧಾನಗಳ ಬಗ್ಗೆಯೂ ಈ ಸಮೀಕ್ಷೆಯಲ್ಲಿ ಮಾಹಿತಿ ಸಂಗ್ರಹಿಸಲಾಯಿತು.
ಸಮೀಕ್ಷೆಯಲ್ಲಿ ಉದ್ಯೋಗಗಳಲ್ಲಿ ತೊಡಗಿರುವ ವಾಹನ ಚಾಲಕರು (ಟ್ಯಾಕ್ಸಿ, ಆಟೋ, ಮತ್ತು ಇತರೆ), ದಿನಗೂಲಿ ನೌಕರರು (ಕಟ್ಟಡ ನಿರ್ಮಾಣ ಮತ್ತು ಇತರೆ), ಮನೆಗೆಲಸದವರು ಮತ್ತು ಕಾರ್ಖಾನೆಗಳ ಕಾರ್ಮಿಕರು (ಗಾರ್ಮೆಂಟ್ ಮತ್ತು ಇತರೆ)ಒಳಗೊಂಡಿದ್ದರು. ಸಮೀಕ್ಷೆಯನ್ನು 2021ರ ನವೆಂಬರ್‌ನಲ್ಲಿ ಆ್ಯಕ್ಷನ್ ಏಯ್ಡ್, ಅಸೋಸಿಯೇಶನ್ ಫಾರ್ ಪ್ರೊಮೋಟಿಂಗ್ ಸೋಶಿಯಲ್ ಆ್ಯಕ್ಷನ್ (APSA), ದಿ ಸೆಂಟರ್ ಫಾರ್ ಅಡ್ವೊಕೆಸಿ ಅಂಡ್ ರಿಸರ್ಚ್ (CFAR), ಹಸಿರು ದಳ, ಗುಬ್ಬಚ್ಚಿ, ರೀಚಿಂಗ್ ಹ್ಯಾಂಡ್, ಸಂಗಮ, ಸ್ವಾಭಿಮಾನ್ ಟ್ರಸ್ಟ್ ಹಾಗೂ ತಮಟೆ ಈ ಸಂಘಟನೆಗಳ ನೆರವಿನೊಂದಿಗೆ ನಡೆಸಲಾಯಿತು.
ಅವಕಾಶ ವಂಚಿತ ವರ್ಗಗಳ ಬದುಕು ದುಸ್ತರ : ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಮೀಕ್ಷಾ ತಂಡದ ಮುಖ್ಯ ಸಂಶೋಧಕ ಅಮಿತ್ ಬಸೋಲೆ ಮಾತಾನಾಡಿ, ಜನರ ಜೀವನೋಪಾಯದ ಮೇಲಿನ ಸಾಂಕ್ರಾಮಿಕದ ದುಷ್ಪರಿಣಾಮಗಳು ಲಾಕ್ಡೌನ್ ಅವಧಿಯ ನಂತರವೂ ಮುಂದುವರೆದಿವೆ. ನಿರ್ದಿಷ್ಟವಾಗಿ, ಸಮಾಜದ ಅವಕಾಶವಂಚಿತ ವರ್ಗಗಳಿಗೆ ಬದುಕು ಇನ್ನೂ ದುಸ್ತರವಾಗಿದೆ. ಈ ಬಿಕ್ಕಟ್ಟಿನಿಂದ ಜನರು ಹೊರಬರುವಂತಾಗಲು ಕೇಂದ್ರ ಮತ್ತು ರಾಜ್ಯಮಟ್ಟದಲ್ಲಿ ದೀಘಾವಧಿ ಪರಿಣಾಮವುಳ್ಳ ನಿರ್ದಿಷ್ಟ ನೀತಿಯನ್ನು ರೂಪಿಸುವ ಅಗತ್ಯವಿದೆ ಎಂದು ಹೇಳಿದರು.
ಬಳಿಕ ಸಮೀಕ್ಷೆಯ ವರದಿ ಬಗ್ಗೆ ವಿಸ್ತರಿಸಿದ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಮೀಕ್ಷಾ ತಂಡದ ಸದಸ್ಯ ಮಂಜುನಾಥ್, 2020ರ ಲಾಕ್ಡೌನ್ ಅವಧಿಯ ನಂತರವೂ ಉದ್ಯೋಗ ಮತ್ತು ಆದಾಯ ನಷ್ಟಗಳು ಮುಂದುವರೆದಿವೆ. ಜನವರಿ- ಫೆಬ್ರವರಿ 2021ರಲ್ಲಿ ಕೂಡ ಶೇ.41ರಷ್ಟು ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಲ್ಲದೇ, ಶೇ.21ರಷ್ಟು ಜನರ ಆದಾಯ ಕುಂಠಿತವಾಗಿತ್ತು. ದಿನಗೂಲಿ ಕಾರ್ಮಿಕರು, ಮನೆಗೆಲಸ ಮಾಡುವವರು ಮತ್ತು ಚಿಲ್ಲರೆ ವ್ಯಾಪಾರ ರಂಗದಲ್ಲಿ ತೊಡಗಿರುವ ಶ್ರಮಿಕರು ಅತ್ಯಂತ ಹೆಚ್ಚಿನ ಹಾನಿಗೊಳಗಿದ್ದಾರೆ.
ದೀರ್ಘಾವದಿ ನಿರುದ್ಯೋಗ : ಕೋವಿಡ್ ಸಾಂಕ್ರಾಮಿಕ ಶುರುವಾಗಿ ಒಂದು-ಒಂದೂವರೆ ವರ್ಷಗಳ ನಂತರವೂ, ಅಂದರೆ 2021ರ ಅಕ್ಟೋಬರ್ನಲ್ಲಿ ಗಣನೀಯ ಪ್ರಮಾಣದ ಜನರು (ಶೇ.10ರಷ್ಟು ಪುರುಷರು, ಶೇ.15ರಷ್ಟು ಮಹಿಳೆಯರು) ಉದ್ಯೋಗ ಕಳೆದುಕೊಂಡ ಸ್ಥಿತಿ ಮುಂದುವರೆದಿತ್ತು. ಆದಾಯ ನಷ್ಟದ ಸ್ಥಿತಿಯೂ ದೀರ್ಘಾವಧಿ ಕಾಲ ಮುಂದುವರೆದಿದ್ದು, ಸಾಂಕ್ರಾಮಿಕದ ಪೂರ್ವದಲ್ಲಿಯೇ ಕಡಿಮೆಯಿದ್ದ ಮಾಸಿಕ ಆದಾಯವು (ಮಾಸಿಕ 9400 ರೂ.ಗಳು) ಇನ್ನೂ ಇಳಿಕೆಯಾಯಿತು.
(2021ರ ಜನವರಿ/ಫೆಬ್ರವರಿಯಲ್ಲಿ ಮಾಸಿಕ 8450 ರೂ.ಗಳು)2021ರ ಅಕ್ಟೋಬರ್ ವೇಳೆಗೆ ಆದಾಯದಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಂಡರೂ, ನಂತರದ ಹಣದುಬ್ಬರದ ಪ್ರಮಾಣವನ್ನು ಪರಿಗಣಿಸಿದರೆ, ಆದಾಯವು ಕೋವಿಡ್ ಪೂರ್ವ ಅವಧಿಗಿಂತ ಕಡಿಮೆ ಪ್ರಮಾಣದಲ್ಲಿ ಮುಂದುವರೆಯಿತು. ಅಂದರೆ ಸಮೀಕ್ಷೆಗೆ ಒಳಪಟ್ಟ ಕುಟುಂಬಗಳು ಹೆಚ್ಚುಕಮ್ಮಿ 19 ತಿಂಗಳುಗಳ ಕಾಲ ಉದ್ಯೋಗ ಮತ್ತು ಆದಾಯದ ನಷ್ಟ ಅನುಭವಿಸಿವೆ ಎಂದು ವಿವರಿಸಿದರು.
ಕೋವಿಡ್ ಪೂರ್ವದಲ್ಲಿಯೇ ಹೆಚ್ಚಿದ್ದ ಬಡತನದ ಪ್ರಮಾಣವು ನಂತರ ಇನ್ನೂ ಹೆಚ್ಚಾಯಿತು. 'ಅನೂಪ್ ಸತ್ಪತಿ ಸಮಿತಿ' ಶಿಫಾರಸು ಮಾಡಿದ್ದ ರಾಷ್ಟ್ರೀಯ ಕನಿಷ್ಠ ವೇತನಕ್ಕಿಂತ (ದಿನಕ್ಕೆ ಪ್ರತಿ ವ್ಯಕ್ತಿಗೆ 119 ರೂ.ಗಳು) ಕಡಿಮೆ ಆದಾಯವುಳ್ಳ ಕುಟುಂಬಗಳ ಶೇಕಡಾವಾರು ಪ್ರಮಾಣ ಸುಮಾರು ಶೇ. 80ಕ್ಕೆ ಏರಿಕೆಯಾಗಿ ಅಕ್ಟೋಬರ್ 2021ರ ವೇಳೆಗೆ ಕೋವಿಡ್ ಪೂರ್ವ ಅವಧಿಯ ಪ್ರಮಾಣ, ಅಂದರೆ ಶೇ.67ನ್ನು ತಲುಪಿತು.
ಸಾಲ ಪಡೆಯಲು ಪರದಾಟ : ಕುಟುಂಬಗಳು ಸಂಕಟದ ಪರಿಸ್ಥಿತಿಯನ್ನು ನಿಭಾಯಿಸಿಲು ಸಾಲ ಪಡೆದದ್ದು ಮಾತ್ರವಲ್ಲದೇ, ತಮ್ಮ ಸ್ವತ್ತುಗಳನ್ನು ಮಾರಿಕೊಳ್ಳಬೇಕಾಯಿತು. ಶೇ.11ರಷ್ಟು ಕುಟುಂಬಗಳು ನಿತ್ಯದ ಖರ್ಚಿಗೆ ಮತ್ತು ಹಳೆಯ ಸಾಲಗಳನ್ನು ತೀರಿಸುವುದಕ್ಕಾಗಿ (ಮುಖ್ಯವಾಗಿ ಅನೌಪಚಾರಿಕ ಮೂಲಗಳಿಂದ) ಸಾಲ ಪಡೆಯಬೇಕಾಯಿತು. ಶೇ.15ರಷ್ಟು ಹೆಚ್ಚುವರಿ ಕುಟುಂಬಗಳು ತಮ್ಮ ಒಡವೆಗಳನ್ನು ಮಾರಿ ಅಥವಾ ಗಿರವಿಯಿಟ್ಟು ತಮ್ಮ ದೈನಂದಿನ ವೆಚ್ಚವನ್ನು ನಿಭಾಯಿಸಬೇಕಾಯಿತು. ಇನ್ನೂ ಶೇ.12ರಷ್ಟು ಹೆಚ್ಚುವರಿ ಕುಟುಂಬಗಳು ಅವಶ್ಯಕತೆಯಿದ್ದಾಗಲೂ ಸಾಲ ಪಡೆಯಲಾಗಲಿಲ್ಲ.
ಇದನ್ನೂ ಓದಿ: ಕೃಷಿ ಹೊಂಡ ನಿರ್ಮಾಣದ ಬಗ್ಗೆ ಪುನರ್ ಪರಿಶೀಲನೆ ಮಾಡಲಾಗುವುದು : ಸಿಎಂ ಭರವಸೆ