ಬೆಂಗಳೂರು : ಆಯುರ್ವೇದ ಶಿಕ್ಷಣ ತಿದ್ದುಪಡಿ ನಿಯಮಾವಳಿ ಅಧಿಸೂಚನೆ ಹಿಂಪಡೆಯುವಂತೆ ಆಗ್ರಹಿಸಿ ಖಾಸಗಿ ಆಸ್ಪತ್ರೆ ವೈದ್ಯರು ಮುಷ್ಕರ ನಡೆಸಲು ಸಜ್ಜಾಗುತ್ತಿದ್ದಾರೆ. ಮಿಕ್ಸೋಪತಿ ವಿರುದ್ಧ ತಿರುಗಿ ಬಿದ್ದಿರುವ ಭಾರತೀಯ ವೈದ್ಯಕೀಯ ಸಂಘವು ನಾಳೆಯಿಂದ ಫೆಬ್ರವರಿ 14ರವರೆಗೆ ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಿದೆ.
ಕೇಂದ್ರ ಸರ್ಕಾರದ ಹೊಸ ನಿಯಮಗಳಂತೆ ಇನ್ಮುಂದೆ ಆಯುಷ್ ವೈದ್ಯರಿಗೆ ಶಸ್ತ್ರಚಿಕಿತ್ಸೆ ತರಬೇತಿ ನೀಡಲಾಗುತ್ತದೆ. ಕೇಂದ್ರ ಸರ್ಕಾರದ ನೋಟಿಫಿಕೇಶನ್ನಲ್ಲಿ ಈ ವರ್ಷದ ಪಿಜಿ ಕೋರ್ಸ್ಗಳಲ್ಲಿ ಸರ್ಜರಿ ಟ್ರೇನಿಂಗ್ ಇದೆ. ಒಟ್ಟು 39 ಜನರಲ್ ಸರ್ಜರಿ ಮತ್ತು 19 ಸ್ಪೆಷಲ್ ಸರ್ಜರಿ ತರಬೇತಿ ಇದೆ.
ಈ ನೋಟಿಫಿಕೇಶನ್ ತಿದ್ದುಪಡಿ ಮಾಡುವಂತೆ ಐಎಂಎ ಒತ್ತಾಯ ಮಾಡುತ್ತಿದೆ. ಸರ್ಕಾರದ ಈ ನಿರ್ಧಾರ ಜನರ ಜೀವದ ಜೊತೆ ಚೆಲ್ಲಾಟ ಆಡಿದಂತೆ ಆಗುತ್ತದೆ. ಹೀಗಾಗಿ, ಕೇಂದ್ರ ಸರ್ಕಾರ ತಂದಿರುವ ನೂತನ ಆಯುರ್ವೇದ ಶಿಕ್ಷಣ ನಿಯಮಾವಳಿಗೆ ಅಲೋಪತಿ ವೈದ್ಯರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಯಾವುದಕ್ಕೆ ಇದೀಗ ಅವಕಾಶ? : ಇನ್ಮುಂದೆ ಆಯುರ್ವೇದ ಪದ್ಧತಿಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲು ಅವಕಾಶ ಕಲ್ಪಿಸಿದ್ದು, ಕಣ್ಣು, ಮೂಗು, ಗಂಟಲು, ಕಿವಿ, ಮೂಳೆ, ಹಲ್ಲು ಹೀಗೆ ವಿವಿಧ ಅಂಗಾಂಗಳ ಶಸ್ತ್ರಚಿಕಿತ್ಸೆ ಸೇರಿ ಅಪೆಂಡಿಕ್ಸ್, ಪಿತ್ತಕೋಶ, ಹಾನಿಕಾರಕವಲ್ಲದ ಗೆಡ್ಡೆ ತೆಗೆಯುವುದು, ಗ್ಯಾಂಗ್ರಿನ್, ಹಲ್ಲಿನ ರೂಟ್ ಕೆನಾಲ್ ಸೇರಿ ಹಲವು ಶಸ್ತ್ರ ಚಿಕಿತ್ಸೆಗೆ ಅವಕಾಶ ಇದೆ.
ಈ ಹಿಂದೆಯು ಅಲೋಪತಿ ವೈದ್ಯರು ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಮತ್ತೊಮ್ಮೆ ದೊಡ್ಡ ಮಟ್ಟದ ಮುಷ್ಕರಕ್ಕೆ ಮುಂದಾಗುತ್ತಿದ್ದಾರೆ. ಆಯುರ್ವೇದ ಶಿಕ್ಷಣದಲ್ಲಿ ಶಲ್ಯ ತಂತ್ರ, ಶಾಲ್ಯಕ ತಂತ್ರ ಎಂಬ ಎರಡು ಕೋರ್ಸ್ ಸೇರ್ಪಡೆ ಮಾಡುತ್ತಿದ್ದು, ಈ ಕೋರ್ಸ್ಗಳಲ್ಲಿ ಆಧುನಿಕ ಶಸ್ತ್ರಚಿಕಿತ್ಸೆ ಮಾಡುವವರಿಗೂ ಹೇಳಿ ಕೊಡಲಾಗುತ್ತದೆ.
ಎಂಬಿಬಿಎಸ್ ಓದದೆ ಶಸ್ತ್ರಚಿಕಿತ್ಸೆ ಮಾಡುವುದು ಗಂಭೀರ ಅಪಾಯಕ್ಕೆ ಕಾರಣವಾಗುತ್ತದೆ ಎಂಬುದು ಅಲೋಪತಿ ವೈದ್ಯರ ವಾದ. ಹೀಗಾಗಿ, ಕಳೆದ ಡಿಸೆಂಬರ್ 11 ರಂದು ಓಪಿಡಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ಇದೀಗ ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಿರುವ ಕಾರಣ ಬೆಂಗಳೂರಿನ ಐಎಂಎ ಕಚೇರಿಯಲ್ಲಿ ವೈದ್ಯರು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.