ಬೆಂಗಳೂರು: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಕೆ.ಆರ್.ಪುರ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಬಿದರಹಳ್ಳಿ ಮೂಲದ ಎಸ್.ರಕ್ಷಿತ್ ಗೌಡ (21), ಹೊಸಕೋಟೆ ಮೂಲದ ನಿವಾಸಿ ಸುಜನ್ (20) ಬಂಧಿತ ಆರೋಪಿಗಳು. ಆರೋಪಿಗಳು ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮೇಡಹಳ್ಳಿ ಸಮೀಪದ ಪಾರ್ವತಿನಗರ ರಸ್ತೆಯಲ್ಲಿ ಗಾಂಜಾ ಮಾರಾಟ ಕೃತ್ಯದಲ್ಲಿ ತೊಡಗಿದ್ದರು. ಖಚಿತ ಮಾಹಿತಿ ಮೇರೆಗೆ ಕೆ.ಆರ್.ಪುರ ಪೊಲೀಸ್ ಇನ್ಸ್ಪೆಕ್ಟರ್ ಎಂ.ಅಂಬರೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ 2.50 ಲಕ್ಷ ಮೌಲ್ಯದ ಸುಮಾರು ಆರು ಕೆಜಿ ತೂಕದ ಗಾಂಜಾ ಜಪ್ತಿ ಮಾಡಿ, ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ಆರೋಪಿಗಳು ಮೋಜು, ಮಸ್ತಿಗಾಗಿ ಗಾಂಜಾ ಮಾರಾಟ ಕೃತ್ಯದಲ್ಲಿ ತೊಡಗಿದ್ದರು ಎಂದು ಕೆ.ಆರ್.ಪುರ ಪೋಲಿಸರು ತಿಳಿಸಿದ್ದಾರೆ.