ಬೆಂಗಳೂರು : ಬಕ್ರೀದ್ ಹಬ್ಬಕ್ಕೆ ಇನ್ನೆರಡು ದಿನ ಮಾತ್ರ ಬಾಕಿ ಇದೆ. ಇದೇ ಸಂದರ್ಭ ಬಳಸಿಕೊಂಡು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ 6 ಗೋವುಗಳನ್ನು ಚಿಕ್ಕಜಾಲ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿತ್ರಾಣ ಪರಿಸ್ಥಿತಿಯಲ್ಲಿದ್ದ ಗೋವುಗಳಿಗೆ ಮೇವು ಹಾಕಿ ಠಾಣಾ ಇನ್ಸ್ಪೆಕ್ಟರ್ ಯಶವಂತ್ ಆಶ್ರಯ ನೀಡಿ ಮಾನವೀಯತೆ ಮೆರೆದಿದ್ದಾರೆ.
ಈಗಾಗಲೇ ಗೋವುಗಳ ಅಕ್ರಮ ಸಾಗಾಣಿಕೆ ತಡೆಯುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಎಚ್ಚರಿಕೆ ವಹಿಸುತ್ತಲೇ ಬಂದಿದ್ದಾರೆ. ಅದರಂತೆ ಇವತ್ತು ಬೆಳ್ಳಂಬೆಳಗ್ಗೆ ಚಿಕ್ಕಜಾಲ ವ್ಯಾಪ್ತಿಯ ಸಾದಹಳ್ಳಿ ಗೇಟ್ ಬಳಿ ಅನುಮಾನಾಸ್ಪದವಾಗಿ ಕಂಡುಬಂದ ವಾಹನವನ್ನು ಪೊಲೀಸರು ತಡೆದಿದ್ದಾರೆ. ಆದ್ರೆ ಪೊಲೀಸರನ್ನ ಕಂಡೊಡನೆ ಚಾಲಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಈ ಬಗ್ಗೆ ಪರಿಶೀಲಿಸಿದಾಗ 6 ಗೋವುಗಳನ್ನ ಉಸಿರಾಟಕ್ಕೂ ಸ್ಥಳಾವಕಾಶವಿರದಂತೆ ವಾಹನದಲ್ಲಿ ಮುಚ್ಚಿಟ್ಟು ಸಾಗಿಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಗೋವುಗಳನ್ನ ಸಾಗಿಸ್ತಿದ್ದ ವಾಹನ ಹಾಗೂ ಗೋವುಗಳನ್ನ ವಶಕ್ಕೆ ಪಡೆದ ಪೊಲೀಸರು, ಠಾಣಾ ಮುಂಭಾಗದಲ್ಲೇ ಅವುಗಳಿಗೆ ತಾತ್ಕಾಲಿಕ ಆಶ್ರಯ ನೀಡಿದ್ದಾರೆ.
ಸದ್ಯ ವಾಹನ ಚಾಲಕ ಹಾಗೂ ಮಾಲೀಕರ ವಿರುದ್ಧ ಚಿಕ್ಕಜಾಲ ಠಾಣೆಯಲ್ಲಿ ಕರ್ನಾಟಕ ರಾಜ್ಯ ಗೋಹತ್ಯೆ ತಡೆ ಕಾಯ್ದೆ, ಪ್ರಾಣಿಗಳ ಮೇಲೆ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಹಾಗೆ ಗೋವುಗಳನ್ನ ಗೋಶಾಲೆಗೆ ನೀಡಲು ನಿರ್ಧರಿಸಿ ಆರೋಪಿಗೆ ಶೋಧ ಮುಂದುವರೆದಿದೆ.