ಬೆಂಗಳೂರು : ಸೈಬರ್ ಭದ್ರತೆ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿ ತಾನು ಗಳಿಸಿರುವ ಪರಿಣಿತಿಯನ್ನು ಕರ್ನಾಟಕ ಸರ್ಕಾರದೊಂದಿಗೆ ಹಂಚಿಕೊಳ್ಳಲು ಸಿದ್ಧವಿದ್ದು, ಸೈಬರ್ ಭದ್ರತಾ ನೀತಿಯನ್ನು ರೂಪಿಸಲು ಅಗತ್ಯ ನೆರವು ನೀಡಲು ಮುಕ್ತ ಮನಸ್ಸು ಹೊಂದಿರುವುದಾಗಿ ಪ್ರತಿಷ್ಠಿತ ಐಬಿಎಂ ಕಂಪನಿ ಹೇಳಿದೆ. ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಅವರನ್ನು ಇಂದು ವಿಕಾಸಸೌಧದಲ್ಲಿ ಭೇಟಿ ಮಾಡಿ ಹಲವು ವಿಚಾರಗಳನ್ನು ಚರ್ಚಿಸಿದ ಮೂವರು ಸದಸ್ಯರ ಐಬಿಎಂ ನಿಯೋಗವು ಈ ಭರವಸೆ ನೀಡಿದೆ.
ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅಗತ್ಯ ವಿಷಯಗಳಲ್ಲಿ ಐಬಿಎಂನ ನೆರವು ಪಡೆದುಕೊಳ್ಳುವುದಾಗಿ ತಿಳಿಸಿದ್ದಾರೆ. ನಿಯೋಗದಲ್ಲಿ ಕಂಪನಿಯ ದಕ್ಷಿಣ ಏಷ್ಯಾ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಪಟೇಲ್, ಐಬಿಎಂ ಕ್ಲೌಡ್ ಮತ್ತು ಕಾಗ್ನಿಟೀವ್ ಸಾಫ್ಟ್‌ವೇರ್ ಲ್ಯಾಬ್ಸ್ ವಿಭಾಗದ ಉಪಾಧ್ಯಕ್ಷ ಗೌರವ್ ಶರ್ಮ ಮತ್ತು ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್ ಬಾಲಾಜಿ ಇದ್ದರು.
ನಿಯೋಗದ ಪರವಾಗಿ ಮಾತನಾಡಿದ ಸಂದೀಪ್ ಪಟೇಲ್, ಸೈಬರ್ ಭದ್ರತೆಗೆ ಸಂಬಂಧಿಸಿದಂತೆ ಐಬಿಎಂ ಇತ್ತೀಚೆಗೆ ಬೆಂಗಳೂರಿನಲ್ಲಿ ತನ್ನ ಸೆಕ್ಯುರಿಟಿ ಕಮಾಂಡ್ ಸೆಂಟರ್ ಅನ್ನು ತೆರೆದಿದೆ. ಸರ್ಕಾರವು ತನ್ನ ದತ್ತಾಂಶಗಳ ಸುರಕ್ಷಿತ ಸಂಗ್ರಹಣೆಗೆ ಇದನ್ನು ಬಳಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಸರ್ಕಾರ ಆಸಕ್ತಿ ತೋರಿಸಿದರೆ, ಸರ್ಕಾರದ ಸಿಬ್ಬಂದಿಗೆ ಕಂಪನಿಯ ವತಿಯಿಂದ ಸೂಕ್ತ ಮತ್ತು ದಕ್ಷ ತರಬೇತಿ ನೀಡಲಾಗುವುದು ಎಂದರು.
ರಾಜ್ಯದಲ್ಲಿ 14 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಿದ್ದು, ಇವುಗಳ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಮುಂದಾಗಿರುವುದು ರಚನಾತ್ಮಕ ಕ್ರಮವಾಗಿದೆ. ಈ ವಲಯದಲ್ಲಿ ಅತ್ಯುತ್ತಮ ಪಠ್ಯಕ್ರಮ ಮತ್ತು ಸಂಶೋಧನಾ ವಿನ್ಯಾಸಗಳನ್ನು ರೂಪಿಸಲು ಕಂಪನಿಯ ನೆರವು ಬಯಸಿದರೆ ಸಹಾಯಹಸ್ತ ಚಾಚಲು ಐಬಿಎಂ ಸಿದ್ಧವಿದೆಯೆಂದರು.
ಇದನ್ನೂ ಓದಿ: ಉದ್ಯಮಶೀಲತೆ ಬೆಳವಣಿಗೆ ತಿಳಿಸುವ ಪಠ್ಯಕ್ರಮ ಪದವಿವರೆಗೆ ಕಡ್ಡಾಯಗೊಳಿಸಲು ಶಿಫಾರಸು
ಸರ್ಕಾರವು ರಾಜ್ಯಾದ್ಯಂತ ಹೊಂದಿರುವ ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ಉನ್ನತೀಕರಿಸುವುದಕ್ಕೆ ಕಂಪನಿಯು ಆಸಕ್ತಿ ಹೊಂದಿದೆಯೆಂದು ಸಚಿವರ ಗಮನಕ್ಕೆ ತಂದರು.