ಬೆಂಗಳೂರು: ಐಎಂಎ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಆರ್. ರೋಷನ್ ಬೇಗ್ ಹೆಸರು ಕೇಳಿಬರುತ್ತಿರುವ ಬೆನ್ನಲ್ಲೇ ಅವರು ನಿನ್ನೆ ತಡರಾತ್ರಿ ನವದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದರು.
ಪುಲಿಕೇಶಿ ನಗರದಲ್ಲಿರುವ ತಮ್ಮ ನಿವಾಸಕ್ಕೆ ಅವರು ಆಗಮಿಸಿದಾಗ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿತ್ತು. ಇಂದು ಬೆಳಗ್ಗೆ ಮನೆಯಿಂದ ತೆರಳಿದ ಅವರು, ಎಲ್ಲಿಗೆ ಹೋಗಿದ್ದಾರೆ, ಯಾರನ್ನು ಭೇಟಿ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಸದ್ಯ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ಹೇಳಲಾಗ್ತಿದೆ.
ಬೆಳಿಗ್ಗೆ 10 ಗಂಟೆಗೆ ಮನೆಯಿಂದ ತೆರಳಿದ ರೋಷನ್ ಬೇಗ್, ಅಜ್ಞಾತ ಸ್ಥಳದಲ್ಲಿ ತಮ್ಮ ಆಪ್ತರ ಜತೆ ಮಾತುಕತೆ ನಡೆಸಿದ್ದಾರೆ. ಐಎಂಎ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬರುತ್ತಿರುವ ಹಿನ್ನೆಲೆ ವಕೀಲರ ಸಲಹೆ ಪಡೆದಿದ್ದಾರೆ. ಐಎಂಎ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿರುವುದರಿಂದ ಮಾಧ್ಯಮಗಳ ಮುಂದೆ ಬರುವ ಮುನ್ನ ಕಾನೂನು ಸಲಹೆ ಪಡೆಯುವ ಉದ್ದೇಶದಿಂದ ವಕೀಲರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.
ಐಎಂಎ ವಂಚನೆ ಪ್ರಕರಣದಲ್ಲಿ ರೋಷನ್ ಬೇಗ್ ಹೆಸರು ಕೇಳಿ ಬಂದ ನಂತರ ಇದೇ ಮೊದಲ ಬಾರಿಗೆ ಅವರು ನಗರದಲ್ಲಿ ಕಾಣಿಸಿಕೊಂಡರು. ಶಿವಾಜಿ ನಗರ ಶಾಸಕರೂ ಆಗಿರುವ ರೋಷನ್ ಬೇಗ್ ಹೆಸರನ್ನು ಐಎಎಂ ಜ್ಯುವೆಲ್ಲರ್ಸ್ ಮಾಲೀಕ ಮನ್ಸೂರ್ ಖಾನ್ ಆಡಿಯೋದಲ್ಲಿ ಪ್ರಸ್ತಾಪಿಸಿದ್ದರು. ಎರಡನೇ ಆಡಿಯೋದಲ್ಲಿ ರೋಷನ್ ಬೇಗ್, ತನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ ಎಂದೂ ಆರೋಪ ಮಾಡಿದ್ದರು. ಈ ಎಲ್ಲಾ ಬೆಳವಣಿಗೆಗಳು ನಡೆಯುವಾಗ ರೋಷನ್ ಬೇಗ್ ದಿಲ್ಲಿಯಲ್ಲಿದ್ದರು.