ಬೆಂಗಳೂರು: ಪೂರ್ವ ನಿಗದಿತ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಾಳೆ ನವದೆಹಲಿಗೆ ತೆರಳುತ್ತಿದ್ದು, ಸದ್ಯದ ಮಟ್ಟಿಗೆ ಹೈಕಮಾಂಡ್ ನಾಯಕರ ಭೇಟಿಗೆ ಸಮಯಾವಕಾಶವನ್ನು ಕೇಳಿಲ್ಲ. ಆ ಬಗ್ಗೆ ಚಿಂತನೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿಗೆ ತೆರಳುವ ಮುನ್ನ ಆರ್‌ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ರಾತ್ರಿ ದೆಹಲಿಗೆ ತೆರಳುತ್ತಿದ್ದೇನೆ. ಏಪ್ರಿಲ್ 30ಕ್ಕೆ ಮುಖ್ಯಮಂತ್ರಿಗಳು ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಕಾನ್ಫರೆನ್ಸ್ ಇದೆ. ಅದರಲ್ಲಿ ಭಾಗಿಯಾಗಲು ದೆಹಲಿಗೆ ಭೇಟಿ ನೀಡುತ್ತಿದ್ದೇನೆ. ಈ ವೇಳೆ, ಹೈಕಮಾಂಡ್ ನಾಯಕರನ್ನ ಭೇಟಿ ಮಾಡುವ ಯೋಚನೆ ಮಾಡಿಲ್ಲ, ಸದ್ಯಕ್ಕೆ ಯಾರ ಸಮಯಾವಕಾಶವನ್ನೂ ಕೋರಿಲ್ಲ ಎಂದರು.
ಎಡಿಜಿಪಿ ಅಮೃತ್ ಪಾಲ್ ವರ್ಗಾವಣೆ ಮಾಡಿರುವುದನ್ನು ನೋಡಿದರೆ ಸರ್ಕಾರ ಅಕ್ರಮ ಮಾಡಿರುವುದನ್ನ ಒಪ್ಪಿಕೊಂಡಂತಾಗಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಕಾಂಗ್ರೆಸ್ನವರು ಏನು ಮಾಡಿದರೂ ಆರೋಪ ಮಾಡುತ್ತಾರೆ. ವರ್ಗಾವಣೆ ಮಾಡದೇ ಬಿಟ್ಟರೆ ಯಾಕೆ ಬಿಟ್ರಿ ಅಂತಾರೆ ತೆಗೆದರೆ ಯಾಕ್ ತೆಗೆದ್ರಿ ಅಂತಾರೆ ಅದಕ್ಕೆಲ್ಲ ಉತ್ತರ ಕೊಡೋಕೆ ಆಗುತ್ತಾ? ಕೆಲ ಎಡಿಜಿಪಿಗಳ ವರ್ಗಾವಣೆಗೆ ಸಮಯ ಬೇಕಿತ್ತು ಎಂದು ಸರ್ಕಾರದ ನಡೆ ಸಮರ್ಥಿಸಿಕೊಂಡರು.
(ಇದನ್ನೂ ಓದಿ: ರಾಜ್ಯದಲ್ಲಿ ಅನಾವಶ್ಯಕ ಕೋವಿಡ್ ನಿರ್ಬಂಧ ಇಲ್ಲ: ಸಿಎಂ ಬೊಮ್ಮಾಯಿ)