ಬೆಂಗಳೂರು: ರಾಜ್ಯ ಬಿಜೆಪಿ ನಾಯಕರು ಹಾಗೂ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ ಶಿವಾನಂದ ವೃತ್ತದ ಸರ್ಕಾರಿ ನಿವಾಸದಲ್ಲಿ ಸುದ್ದಿಗಾರ ಜೊತೆ ಮಾತನಾಡಿದ ಅವರು ಜಿಲ್ಲಾ ಸಚಿವರು ಕೊಡಗಲ್ಲೇ ಕೂತಿದಾರಾ? ಸಿಎಂ ಹೋಗಿದಾರಾ ಅಲ್ಲಿಗೆ? ಪರಿಹಾರ ಕೊಟ್ಟಿದಾರಾ? ಸರ್ಕಾರಕ್ಕೆ ಗೊತ್ತಾ ಕೊಡಗಲ್ಲಿ ಏನಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಶ್ಚಾತ್ತಾಪ ಆಗಿದೆ ಎಂದು ಹೇಳಿಲ್ಲ. ಸ್ವಾಮೀಜಿಗೆ ವಿವರಣೆ ಕೊಟ್ಟೆ ಅಷ್ಟೇ. ಧರ್ಮ ಒಡೆಯುವ ಉದ್ದೇಶ ಇರಲಿಲ್ಲ. ಶಾಮನೂರು ಮತ್ತು ಮಾತೆ ಮಹಾದೇವಿ ಅವರು ಒಂದು ಲೆಟರ್ ಕೊಟ್ಟಿದ್ರು. ನಾಗಮೋಹನದಾಸ್ ಕಮಿಟಿ ರಿಪೋರ್ಟ್ನಲ್ಲಿ ಧರ್ಮ ಒಡೆಯೋ ಉದ್ದೇಶ ಇಲ್ಲ ಅಂತ ಹೇಳಿದಿನಿ ಅಷ್ಟೇ. ಯಾರು ಹೇಳಿದ್ದು ಇದು ವಿವಾದ ಅಂತ? ನೀವೇ ವಿವಾದ ಮಾಡ್ತಾ ಇರೋದು ಈಗ. ಸ್ವಾಮೀಜಿ ಪಶ್ಚಾತ್ತಾಪದ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ಈ ವಿಚಾರವಾಗಿ ಸದಾಶಿವನಗರ ತಮ್ಮ ನಿವಾಸದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮನುಷ್ಯ ತಪ್ಪು ಮಾಡಿದ್ರೆ ಒಪ್ಪಿಕೊಳ್ಳುವುದರಲ್ಲಿ ತಪ್ಪಿಲ್ಲ. ನಾವೇನೂ ದೇವರು ಅಲ್ಲ. ದೇವರು ಕೂಡ ತಪ್ಪು ಮಾಡಿದ್ದಾಗ ಒಪ್ಪಿಕೊಂಡಿದ್ದಾರೆ. ಅವತ್ತು ನಾನು ಕೂಡ ಕ್ಯಾಬಿನೆಟ್ನಲ್ಲಿದ್ದೆ. ಸಾಕಷ್ಟು ವಿರೋಧ ಮಾಡಿದ್ದೆ.
ಸಿದ್ದರಾಮಯ್ಯ ನಿನ್ನೆ ರಂಬಾಪುರಿ ಶ್ರಿಗಳ ಆಶೀರ್ವಾದ ಪಡೆದಿದ್ದಾರೆ. ಎಲ್ಲ ಧರ್ಮದ ಆಶೀರ್ವಾದ ನಮಗೆ ಬೇಕು. ನಿನ್ನೆ ಸ್ವಾಮೀಜಿ ಜೊತೆ ಸಿದ್ದರಾಮಯ್ಯ ಮಾತನಾಡಿದ್ದಾರೆ. ಅವರಿಬ್ಬರ ಸಂಭಾಷಣೆ ನನಗೆ ಗೊತ್ತಿಲ್ಲ. ಅವತ್ತು ನಾನು ಬಹಿರಂಗವಾಗಿ ಕ್ಷಮೆ ಕೇಳಿದ್ದೆ. ಧರ್ಮದ ವಿಚಾರದಲ್ಲಿ ಕೈ ಹಾಕಬಾರದು ಅಂದಿದ್ದೆ ಎಂದು ತಿಳಿಸಿದರು.
(ಇದನ್ನೂ ಓದಿ: ಬಾಳೆಹೊನ್ನೂರು ಮಠಕ್ಕೆ ಸಿದ್ದರಾಮಯ್ಯ ಭೇಟಿ: ರುದ್ರಾಕ್ಷಿ ಹಾರ ಹಾಕಿದ ರಂಭಾಪುರಿ ಶ್ರೀ)
ಡಿಕೆಶಿ ಪ್ರತಿಕ್ರಿಯೆ: ಕಾಂಗ್ರೆಸ್ ಹಿಂದುತ್ವ ಒಪ್ಪಿಕೊಳ್ಳಲಿ ಎಂಬ ವಿಚಾರಕ್ಕೆ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ನಾನೇನು ಹಿಂದೂ ಅಲ್ವೇನ್ರಿ? ಗಾಂಧಿ ಪರಿವಾರ ಕಾಶ್ಮೀರದ ಪಂಡಿತರು. 25 ವರ್ಷದ ಹಿಂದೆ ಯುಗಾದಿ ಹಬ್ಬದ ದಿನ ಸೋನಿಯಾ ಮನೆಗೆ ಹೋಗಿದ್ವಿ. ಅವತ್ತು ಯುಗಾದಿ ಹಬ್ಬ ಇತ್ತು. ಸೋನಿಯಾ ಅವರು ಯುಗಾದಿ ಹಬ್ಬ ಮಾಡ್ತಾ ಇದ್ರು. ನನಗೆ ಶಿವನ ಮಗ ಕುಮಾರ ಅಂತ ಹೆಸರು ಇಟ್ಟಿದ್ದಾರೆ. ಸಿದ್ದರಾಮಯ್ಯ ಅಂತ ಅವರಿಗೆ ಹೆಸರು ಇಟ್ಟಿದ್ದಾರೆ. ಕಲ್ಲು ಮಣ್ಣು ಅಂತ ಹೆಸರು ಇಟ್ಟಿಕೊಂಡಿದ್ದೇವಾ..? ಹಿಂದುತ್ವ ಅವರಪ್ಪನ ಆಸ್ತೀನಾ..? ಎಂದು ಕಿಡಿಕಾರಿದರು.
ರಂಭಾಪುರಿ ಶ್ರೀ ಹೇಳಿದ್ದೇನು?: ಧರ್ಮ ಒಡೆಯುವುದು ನನ್ನ ಉದ್ದೇಶ ಆಗಿರಲಿಲ್ಲ. ಕೆಲವರು ನನ್ನನ್ನು ದಾರಿ ತಪ್ಪಿಸಿದರು. ಹೀಗೆಂದು ವೀರಶೈವ ಲಿಂಗಾಯತ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ ಎಂದು ಬಾಳೆಹೊನ್ನೂರು ಸಮೀಪದ ಶ್ರೀಮದ್ ರಂಭಾಪುರಿ ಮಠದ ಪ್ರಸನ್ನ ರೇಣುಕಾವೀರ ಸೋಮೇಶ್ವರ ಶಿವಾಚಾರ್ಯರು ಶುಕ್ರವಾರ ತಿಳಿಸಿದ್ದರು.
ಶುಕ್ರವಾರ ಚಿಕ್ಕಮಗಳೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಜಿಲ್ಲೆಯ ಎನ್ಆರ್ ಪುರ ತಾಲೂಕಿನಲ್ಲಿರುವ ಬಾಳೆಹೊನ್ನೂರು ಸಮೀಪದ ಶ್ರೀಮದ್ ರಂಭಾಪುರಿ ಮಠಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದರು. ಅಲ್ಲದೇ, ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದು ಕೆಲ ಮಾತುಕತೆ ನಡೆಸಿದ್ದರು.
(ಇದನ್ನೂ ಓದಿ: ಧರ್ಮದ ವಿಚಾರವಾಗಿ ನನ್ನ ದಾರಿ ತಪ್ಪಿಸಿದರೆಂದು ಸಿದ್ದರಾಮಯ್ಯ ಹೇಳಿದ್ರು: ರಂಭಾಪುರಿ ಶ್ರೀ)