ಬೆಂಗಳೂರು: ಒಬ್ಬ ಮಾಜಿ ಸಿಎಂ ಆದವರು ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಇಂಥ ಪರಿಸ್ಥಿತಿ ಬರಬಾರದಿತ್ತು, ಸಿದ್ದರಾಮಯ್ಯ ಮುಂದಿನ ಸಿಎಂ ಎನ್ನೋದಕ್ಕೆ ಇದು ಟೂ ಅರ್ಲಿ. ಅಲ್ದೆ ಸಿಎಂ ಸ್ಥಾನ ಪತ್ರಾವಳಿ ಅಲ್ಲ, ಆ ಸ್ಥಾನ ಉಂಡು ಬಿಸಾಡೋದಲ್ಲ. ಅದನ್ನು ಸ್ವಚ್ಚವಾಗಿಟ್ಟು ಮುಂದೆ ಬರುವವರಿಗೆ ಅವಕಾಶ ಕೊಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಟಾಂಗ್ ನೀಡಿದ್ದಾರೆ.
ಆರ್.ಟಿ.ನಗರದಲ್ಲಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ವಿಶ್ವನಾಥ್ ಭೇಟಿ ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಸಿಎಂ ಎಂಬ ಗೊಂದಲ ಸೃಷ್ಟಿಯಾಗಿದೆ. ಶಿಷ್ಯಂದಿರು ಎಲ್ಲವನ್ನೂ ಮಾತಾಡುತ್ತಾರೆ, 150 ಸೀಟು ಬರುತ್ತೆ ಅಂತಾರೆ. ಆದರೆ, ಸಿದ್ದರಾಮಯ್ಯ ಸಿಎಂ ಆದಾಗಲೇ ಯಾಕೆ 70 ಸೀಟಿಗೆ ಬಂದು ನಿಂತಿದ್ದೀರಿ. ಸಿಎಂ ಆಗುತ್ತಾರೆ ಎನ್ನುವ ಸಿದ್ದರಾಮಯ್ಯಗೆ ಈಗ ಕ್ಷೇತ್ರವೇ ಇಲ್ಲ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಬೇರೆ ಪಕ್ಷದಿಂದ ಬಂದಿದ್ದರೂ ಅವರಿಗೆ ಈಗಾಗಲೇ ಮುಖ್ಯಮಂತ್ರಿ ಸ್ಥಾನದ ಅವಕಾಶ ಕೊಟ್ಟಾಗಿದೆ. ಡಿ.ಕೆ.ಶಿವಕುಮಾರ್ ಅದೇ ಪಕ್ಷದಲ್ಲಿ ಇದ್ದವರು, ಅವರಿಗೆ ಅವಕಾಶ ಸಿಗಬೇಕು. ಒಂದ್ ಸಲ ಸಿದ್ದರಾಮಯ್ಯಗೆ ಅವಕಾಶ ಸಿಕ್ಕಾಗಿದೆ. ಈಗ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಇದ್ದಾರೆ. ಜಮೀರ್ನ ಮುಂದಿಟ್ಟುಕೊಂಡು ಹೋಗಬೇಡಿ ಸಿದ್ದರಾಮಯ್ಯನವರೇ ಒಳ್ಳೆಯದಾಗಲ್ಲ ಎಂದರು.
ರಮೇಶ್ ಜಾರಕಿಹೊಳಿ ರಾಜಕೀಯ ತಂತ್ರಗಾರಿಕೆ ವಿಚಾರ ಕುರಿತು ಮಾತನಾಡಿದ ವಿಶ್ವನಾಥ್, ಕಾನೂನು ವಿಚಾರದಲ್ಲಿ ಬೇರೆಯವರು ಏನೂ ಹೇಳೋದಕ್ಕಾಗಲ್ಲ. ಅವರು ಸಿಡಿ ಕೇಸ್ನಲ್ಲಿ ಸಿಕ್ಕಿಹಾಕಿಕೊಂಡಿದ್ದು ದುರಾದೃಷ್ಟ. ಅವರೇ ಸಿಕ್ಕಿಹಾಕಿಕೊಂಡರೋ, ಬೇರೆಯವರು ಸಿಕ್ಕಿ ಹಾಕ್ಸಿದರೋ ಗೊತ್ತಿಲ್ಲ. ಆದರ, ಅವರ ರಾಜಕೀಯ ನಿರ್ಧಾರದಲ್ಲಿ, ಕಾನೂನು ವಿಚಾರದಲ್ಲಿ ಎಲ್ಲರೂ ಮಾತನಾಡುವುದಕ್ಕೆ ಆಗುವುದಿಲ್ಲ. ಬಿಜೆಪಿ ಹೈಕಮಾಂಡ್ ಮುಂದೆ ನಮ್ಮ ಎಲ್ಲ ವಿಚಾರ ಹೇಳಲಾಗಿದೆ. ನಿರ್ಧಾರ ತೆಗೆದುಕೊಳ್ಳೋದು ಅವರಿಗೆ ಬಿಟ್ಟಿದ್ದು ಎಂದರು.
ಇದನ್ನೂ ಓದಿ: ಫಡ್ನವಿಸ್ ಭೇಟಿ ಸಫಲ: ರಮೇಶ್ ಜಾರಕಿಹೊಳಿಗೆ ಬಿಎಸ್‌ವೈ ಬುಲಾವ್!