ಬೆಂಗಳೂರು: ಮನೆ ಬಾಡಿಗೆಗೆ ಎತ್ತಿಟ್ಟಿದ್ದ ಹಣದಲ್ಲಿ ಆಭರಣ ಖರೀದಿಸಿದ ವಿಚಾರಕ್ಕೆ ದಂಪತಿ ನಡುವೆ ಆರಂಭವಾದ ಜಗಳ ಪತ್ನಿ ಕೊಲೆಯಲ್ಲಿ ಅಂತ್ಯವಾಗಿದೆ. ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ದಯಾನಂದ ನಗರದಲ್ಲಿ ವಾಸವಿದ್ದ ನಾಜೀಯಾ ಕೊಲೆಯಾದ ಮಹಿಳೆ. ಫಾರೂಕ್ ಕೊಲೆ ಮಾಡಿದ ಆರೋಪಿ ಪತಿ. ಈ ಸಂಬಂಧ ಮೃತಳ ಪೋಷಕರು ನೀಡಿದ ದೂರಿನ ಮೇರೆಗೆ ಫಾರೂಕ್ನನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಹಿನ್ನೆಲೆ..
ಕೆ.ಎಂ. ಕಾಲೋನಿಯಲ್ಲಿ ಕಳೆದ 2 ವರ್ಷದಿಂದ ಫಾರೂಕ್ ಹಾಗು ನಾಜೀಯಾ ದಂಪತಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇವರಿಗೆ ಮೂರು ಮಕ್ಕಳಿದ್ದಾರೆ. ಫಾರೂಕ್ ಆಟೋವನ್ನು ಬಾಡಿಗೆಗೆ ಪಡೆದು ಓಡಿಸುತ್ತಿದ್ದ. ವಾರದ ಹಿಂದೆ ಫಾರೂಕ್ ಮನೆ ಬಾಡಿಗೆ ಕಟ್ಟಲು 6,500 ರೂ.ಗಳನ್ನು ಪತ್ನಿ ಕೈಗೆ ಕೊಟ್ಟಿದ್ದನಂತೆ. ಆದರೆ ನಾಜೀಯಾ ಆಭರಣದ ಆಸೆಗೆ ಪತಿಗೆ ತಿಳಿಸದೆ ಆ ಹಣದಲ್ಲಿ ಫ್ಯಾನ್ಸ್ ಆಭರಣ ಖರೀದಿಸಿದ್ದರಂತೆ. ನ. 2 ರಂದು ಮನೆ ಬಾಡಿಗೆ ಕಟ್ಟಲು ಪತಿ ಹಣ ಕೇಳಿದಾಗ, ನಾಜೀಯಾ ಆಭರಣ ಖರೀದಿಸಿರುವುದು ಗೊತ್ತಾಗಿದೆ. ಇದರಿಂದ ಸಿಟ್ಟಿಗೆದ್ದ ಫಾರೂಕ್ ಪತ್ನಿಯನ್ನ ಪ್ರಶ್ನಿಸಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಜಗಳ ನಡೆದಿದೆ.
ಕುಪಿತಗೊಂಡ ಫಾರೂಕ್, ನಾಜೀಯಾ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ನಾಜೀಯಾ ಪ್ರಜ್ಞೆ ಕಳೆದುಕೊಂಡಿದ್ದಾರೆ. ತಕ್ಷಣ ಪತ್ನಿಯನ್ನು ಫಾರೂಕ್ ಆಸ್ಪತ್ರೆಗೆ ದಾಖಲು ಮಾಡಲು ಮುಂದಾಗಿದ್ದ. ಆದರೆ ಎರಡು ಆಸ್ಪತ್ರೆಗಳಲ್ಲಿ ನಾಜೀಯಾ ಅವರನ್ನು ದಾಖಲು ಮಾಡಿಕೊಂಡಿಲ್ಲ ಎನ್ನಲಾಗ್ತಿದೆ.
ಈ ವೇಳೆ ನಾಜೀಯಾ ಸ್ಥಿತಿ ತುಂಬಾ ಗಂಭೀರವಾಗಿದ್ದು, ಬೇರೊಂದು ಆಸ್ಪತ್ರೆಗೆ ಕರೆದೊಯ್ಯುವಂತೆ ಅಲ್ಲಿನ ವೈದ್ಯರು ಸೂಚಿಸಿದ್ದಾರೆ. ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ ಪ್ರಯೋಜನವಾಗಲಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ನಾಜೀಯಾ ಮೃತಪಟ್ಟಿದ್ದಾರೆ.
ಈ ಸಂಬಂಧ ಮೃತ ನಾಜೀಯಾ ಕುಟುಂಬಸ್ಥರು ಫಾರೂಕ್ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿ ಫಾರೂಕ್ನನ್ನು ಬಂಧಿಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ. ಇನ್ನು ನಾಜೀಯಾ ಅವರನ್ನು ದಾಖಲು ಮಾಡಿಕೊಳ್ಳದ ಎರಡು ಆಸ್ಪತ್ರೆಗಳಿಗೆ ಕಾರಣ ಕೇಳಿ ನೋಟಿಸ್ ಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಕೋಬ್ರಾ ಕಮಾಂಡೋ, ಸಿಆರ್ಪಿಎಫ್ ಜಂಟಿ ಕಾರ್ಯಾಚರಣೆ: 8 ಮಂದಿ ನಕ್ಸಲರ ಬಂಧನ