ಬೆಂಗಳೂರು: ಮಾನವ ಕಳ್ಳಸಾಗಾಣಿಕೆ ಎಂಬುದು ಇತ್ತೀಚಿನ ದಿನಗಳಲ್ಲಿ ಮಿತಿ ಮೀರಿ ನಡೆಯುತ್ತಿದೆ. ಅಪ್ರಾಪ್ತರು, ಮಹಿಳೆಯರು ಮತ್ತು ಯುವಕರು ಈ ಸಮಸ್ಯೆಗೆ ಒಳಗಾಗುತ್ತಿರುವುದು ಅತ್ಯಂತ ನೋವಿನ ಸಂಗತಿ. ದಂಧೆಯಾಗಿ ಮಾರ್ಪಾಟಾಗಿರುವ ಈ ಜಾಲದಲ್ಲಿ ಅಮಾಯಕ ಜೀವಗಳು ಮೋಸದ ಬಲೆಗೆ ಬಿದ್ದು, ಅದರಿಂದ ಬಿಡಿಸಿಕೊಂಡು ಹೊರ ಬರಲಾಗದೆ ನರಳಾಡುತ್ತಿವೆ.
ಮಾನವ ಕಳ್ಳಸಾಗಾಣಿಕೆ ಮತ್ತು ಮಾರಾಟ ದೇಶದಲ್ಲಿ ಶಿಕ್ಷಾರ್ಹ ಅಪರಾಧ ಮತ್ತು ಹೀನ ಕೃತ್ಯ. ಮಾನವ ಕಳ್ಳಸಾಗಣೆ ತಡೆ ಮತ್ತು ನಿಷೇಧ ಕಾಯ್ದೆಯಡಿ ಶಿಕ್ಷೆ ನೀಡಲಾಗುತ್ತದೆ. ಇಂತಹ ಕಠಿಣ ಕಾಯ್ದೆ ಇದ್ದರೂ ಈ ದಂಧೆ ಅವ್ಯಾಹತವಾಗಿ ನಡೆಯುತ್ತಿರುವುದು ನಾಚಿಕೆಗೇಡು. ಅಂತಾರಾಷ್ಟ್ರೀಯ ಜಾಲವೇ ಇದರ ಹಿಂದೆ ಇದ್ದು, ಕೋಟ್ಯಂತರ ವಹಿವಾಟು ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ.
ಬಲವಂತದ ಮದುವೆ, ಕೆಲಸ ಮತ್ತು ಲೈಂಗಿಕ ದಾಸ್ಯದ ವಿಚಾರಕ್ಕೆ ಮಹಿಳೆಯರು ಮತ್ತು ಮಕ್ಕಳನ್ನು ಸಾಗಿಸಲಾಗುತ್ತಿದೆ. ಅದರಲ್ಲಿ 18 ವರ್ಷದ ಕೆಳಗಿನ ಹೆಣ್ಣು ಮಕ್ಕಳೇ ಹೆಚ್ಚು. ವಿಮಾನ ನಿಲ್ದಾಣದ ಮೂಲಕವೂ ಈ ಕಾರ್ಯ ಸಕ್ರಿಯವಾಗಿದೆ. ಆದರೆ, ಪೊಲೀಸರಿಗೆ ಗೊತ್ತೇ ಆಗುವುದಿಲ್ಲ. ಅಲ್ಲದೆ, ಯಾರೊಬ್ಬರೂ ಮೇಲೂ ಕ್ರಮ ಜರುಗಿಸಿಲ್ಲ. ಇದು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದು, ಕೂಲಂಕುಶವಾಗಿ ತನಿಖೆ ನಡೆಸುವಂತೆ ಗೃಹ ಇಲಾಖೆ ಚಾಟಿ ಬೀಸಿದೆ. ಇನ್ನು ಹಳ್ಳಿಯ ಕೆಲ ಶಾಲೆಗಳಿಂದ ಮಕ್ಕಳನ್ನು ಸಾಗಿಸುತ್ತಿದ್ದರೂ ಪೊಲೀಸ್ ಇಲಾಖೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ.
ಇದೇ ವಿಚಾರವಾಗಿ ಜನವರಿ 1ರಂದು ಎಲ್ಲ ಇಲಾಖೆಗಳ ಜೊತೆ ಸಭೆ ನಡೆಸಿದ ಸಿಎಂ ಗಂಭೀರವಾಗಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸದ್ಯ ರೈಲು ನಿಲ್ದಾಣಗಳಲ್ಲಿ ಹಾಗೂ ಬಸ್ ನಿಲ್ದಾಣಗಳಲ್ಲಿ ಮಾನವ ಕಳ್ಳಸಾಗಣೆ ಹೆಚ್ಚಾಗುತ್ತಿದೆ. ಆದರೆ, ಇದು ಪೊಲೀಸರ ಕಣ್ಣಿಗೆ ಯಾಕೆ ಕಾಣುತ್ತಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಪ್ರಕರಣಗಳು ಮತ್ತು ರಕ್ಷಣೆ
- ಐಪಿಸಿ ಸೆಕ್ಷನ್ ಅಡಿ 34, 344, 363A, 366, 366A, 366B, 370, 370A, 371, 372, 373, 375, 376 ಅಡಿ 8 ಪ್ರಕರಣ ದಾಖಲು, 17 ಮಂದಿ ರಕ್ಷಣೆ, ಆರು ಮಂದಿ (4 ಮಹಿಳೆಯರು, ಇಬ್ಬರು ಪುರುಷರು) ಬಂಧನ.
- ಪ್ರಿವೆಷನ್ ಆ್ಯಕ್ಟ್ ಐಪಿಸಿ 3, 4, 5, 5A, 5B, 5C, 6, 7, 18 ಅಡಿಯಲ್ಲಿ 43 ಪ್ರಕರಣ ದಾಖಲು. 112 ಮಹಿಳೆಯರು, ಎರಡು ಪುಟ್ಟ ಹೆಣ್ಣು ಮಕ್ಕಳು ಸೇರಿ 114 ಮಂದಿ ರಕ್ಷಣೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 117 ಮಂದಿ (87 ಪುರುಷರು, 39 ಮಹಿಳೆಯರು) ಬಂಧನ.
- ಬಾಲಕಾರ್ಮಿಕರು: ಸಂಬಂಧಿಸಿದಂತೆ 5 ಪ್ರಕರಣ ದಾಖಲು, 6 ಬಂಧನ.
- ವೇಶ್ಯಾವಾಟಿಕೆಗೆ ಮಕ್ಕಳ ಬಳಕೆ: 6 ಪ್ರಕರಣ ದಾಖಲು, 13 ಬಂಧನ.
- ರೈಲು ಮೂಲಕ ಬಸ್ಸಿನಲ್ಲಿ ಕರೆ ತಂದಾಗ: 2 ಪ್ರಕರಣ, ಇಬ್ಬರು ಅಪ್ರಾಪ್ತೆಯರ ರಕ್ಷಣೆ, ಒಬ್ಬರ ಬಂಧನ
ಒಟ್ಟು ಪ್ರಕರಣಗಳು: 2020ರಲ್ಲಿ ನೋಡುವುದಾದರೆ ಈವರೆಗೆ 65 ಪ್ರಕರಣ ದಾಖಲಾಗಿದ್ದು, 100 ಪುರುಷರು, 196 ಮಹಿಳೆಯರು, 21 ಅಪ್ರಾಪ್ತ ಬಾಲಕರು, 34 ಅಪ್ರಾಪ್ತ ಬಾಲಕಿಯರು ಸೇರಿ 345 ಮಂದಿಯನ್ನು ರಕ್ಷಿಸಲಾಗಿದೆ. ಹೀಗೆ ಮಾನವ ಕಳ್ಳ ಸಾಗಾಣಿಕೆ ಮಾಡುತ್ತಿದ್ದ 147 ಜನರನ್ನು (111 ಪುರುಷರು, 36 ಮಹಿಳೆಯರು) ಬಂಧಿಸಲಾಗಿದೆ.
ಮಾನವ ಸಾಗಾಟ ಮಾರಾಟ ಎಲ್ಲೆಡೆ ಸರಪಳಿಯಾಗಿದ್ದು, ಬಡತನ, ಅಮಾಯಕ, ಅಸಯಾಕತೆ, ಮಕ್ಕಳನ್ನು ಈ ಜಾಲಕ್ಕೆ ಬಳಸುತ್ತಾರೆ. ಶೇ.95 ಮಂದಿ ವೇಶ್ಯಾವಾಟಿಕೆಗೆ ಬಳಕೆ, ಭಿಕ್ಷಾಟನೆ ಹೀಗೆ ಬೇರೆ ಬೇರೆ ಕಾರಣಕ್ಕೆ ಈ ಸಾಗಾಟ ನಡೆಯುತ್ತದೆ. ಅದರ ಕಡಿವಾಣಕ್ಕೆ ದೇಶದಲ್ಲಿ ಕಾನೂನು ಇದ್ದರೂ ಪ್ರಯೋಜನ ಇಲ್ಲವಾಗಿದೆ ಎಂದು ಸಂಶೋಧಕಿ ಡಾ.ಲೀಲಾ ಸಂಪಿಗೆ ತಿಳಿಸಿದರು.
ಸಾಮಾಜಿಕ ಕಾರ್ಯಕರ್ತೆ ಕೆ.ಎಸ್.ವಿಮಲಾ ಮಾತನಾಡಿ, ಮಾನವ ಕಳ್ಳಸಾಗಾಣಿಕೆ ಇದು ಶಿಕ್ಷಾರ್ಹ ಅಪರಾಧ. ಆದರೂ ನಿರಂತರವಾಗಿ ನಡೆಯುತ್ತಿದೆ. ಒಂದು ಸಮಾಜ, ಮತ್ತೊಂದು ಸರ್ಕಾರ ಮತ್ತು ಪೊಲೀಸ್ ಇಲಾಖೆ ವಿಫಲತೆಯೇ ಅದಕ್ಕೆ ಕಾರಣ. ಪೊಲೀಸರಿಗೆ ಮೊದಲೇ ಈ ಕುರಿತು ಮಾಹಿತಿ ಇರುತ್ತದೆ. ಆದರೂ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಪ್ರಕರಣ ಮುಚ್ಚಿ ಹಾಕುತ್ತಾರೆ ಎಂದು ಮಾಹಿತಿ ನೀಡಿದರು.