ಬೆಂಗಳೂರು: ಚಿರತೆಯನ್ನು ಹಿಡಿಯಲು ತಜ್ಞರ ಅಗತ್ಯ ಇಲ್ಲ, ನೀವೇ ಹಿಡಿಯಬಹುದು ಎಂದು ಸಚಿವ ಗೋವಿಂದ ಕಾರಜೋಳ ಅವರಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ ಸ್ವಾರಸ್ಯಕರ ಚರ್ಚೆಗೆ ವಿಧಾನಸಭೆ ಕಲಾಪ ಸಾಕ್ಷಿಯಾಯಿತು.
ಶೂನ್ಯ ವೇಳೆಯಲ್ಲಿ ಹುಬ್ಬಳ್ಳಿಯಲ್ಲಿ ಚಿರತೆ ಪ್ರತ್ಯಕ್ಷ ವಿಷಯವನ್ನು ಶಾಸಕ ಅಬ್ಬಯ್ಯ ಪ್ರಸ್ತಾಪಿಸಿ, ಒಂದು ವಾರವಾದ್ರೂ ಚಿರತೆ ಸೆರೆ ಹಿಡಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ನಮ್ಮ ಕ್ಷೇತ್ರದಲ್ಲಿ ಎರಡು ಮೂರು ಚಿರತೆ ಇವೆ ಎಂದು ರೇಣುಕಾಚಾರ್ಯ ಹೇಳಿದರು. ಆಗ ಜಗದೀಶ್ ಶೆಟ್ಟರ್ ಎದ್ದು ನಿಂತು, ಸೆ.15 ರಿಂದ ಚಿರತೆ ಓಡಾಡುತ್ತಿದೆ. ಇಲ್ಲಿಯವರೆಗೆ ಹಿಡಿದಿಲ್ಲ ಅಂದರೆ ಜನ ಓಡಾಡುವುದು ಹೇಗೆ? ಏಕೆ ಹಿಡಿಯಲು ಸಾಧ್ಯವಾಗುತ್ತಿಲ್ಲ. ಏನಾದರೂ ಅಪಾಯವಾದರೆ ಗತಿ ಏನು? ಎಂದು ಪ್ರಶ್ನಿಸಿದರು.
ಸರ್ಕಾರದ ಪರವಾಗಿ ಉತ್ತರ ನೀಡಿದ ಸಚಿವ ಗೋವಿಂದ ಕಾರಜೋಳ, ಹುಬ್ಬಳ್ಳಿಯಲ್ಲಿ ಚಿರತೆ ಬಂದಿರುವ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಆದಷ್ಟು ಬೇಗ ಹಿಡಿಯುತ್ತೇವೆ ಎಂದರು. ಯಾರೂ ಕೂಡ ಭಯಭೀತರಾಗುವ ಅಗತ್ಯ ಇಲ್ಲ, ತಜ್ಞರನ್ನು ಕರೆಸಿ ಚಿರತೆ ಸೆರೆ ಹಿಡಿಯುವ ಕೆಲಸ ಮಾಡುತ್ತೇವೆ ಎಂದು ಸಚಿವ ಕಾರಜೋಳ ಉತ್ತರ ಕೊಟ್ಟರು.
ಈ ವೇಳೆ ಮಧ್ಯ ಪ್ರವೇಶಿದ ಸಿದ್ದರಾಮಯ್ಯ, ಚಿರತೆ ಹಿಡಿಯಲು ತಜ್ಞರ ಅವಶ್ಯಕತೆ ಇಲ್ಲ. ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಇದ್ದಾರೆ ಎಂದರು. ನೀವೇ ಚಿರತೆ ಹಿಡಿಯಬಹುದು, ತಜ್ಞರು ಬೇಕಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಇದಕ್ಕೆ ಕಾರಜೋಳ ಅವರನ್ನು ನೀವು ಏನು ಮಾಡಬೇಕು ಅಂತ ಇದ್ದೀರಾ ಎಂದು ಎಂದು ಸ್ಪೀಕರ್ ಕಾಗೇರಿ ಸಿದ್ದರಾಮಯ್ಯಗೆ ಪ್ರಶ್ನಿಸಿದರು.