ಬೆಂಗಳೂರು: ಲಾಕ್‌ಡೌನ್ ನೀಡಿದ ಹೊಡೆತಕ್ಕೆ ಆರ್ಥಿಕತೆ ಮಕಾಡೆ ಮಲಗಿದ್ದು, ಮೇ ತಿಂಗಳಲ್ಲಿ ಆರಂಭವಾದ ಅನ್ಲಾಕ್ ಪ್ರಕ್ರಿಯೆ ಈಗ ಕೊನೆಯ ಹಂತಕ್ಕೆ ತಲುಪಿದೆ. ಆರ್ಥಿಕ ಪರಿಣಾಮಗಳನ್ನು ಅನುಕರಿಸಿ ದೇಶವನ್ನು ಸಾಮಾನ್ಯ ಸ್ಥಿತಿಗೆ ತರಲು ಸರ್ಕಾರ ಮುಂದಾಗಿ ಲಾಕ್‌ಡೌನ್ ಸಡಿಲಿಕೆ ಮಾಡಿತು. ಹೀಗಾಗಿ, ಬಿಕೋ ಎನ್ನುತ್ತಿದ್ದ ಜನಸಂದಣಿ ಪ್ರದೇಶಗಳು ಇದೀಗ ಜನದಟ್ಟಣೆಯಿಂದ ಕೂಡಿವೆ. ಇದರಿಂದ, ಕೊರೊನಾ ಪ್ರಕರಣಗಳು ಹೆಚ್ಚಾಗಲು ಕಾರಣವಾಯಿತು.
ರಾಷ್ಟ್ರದಲ್ಲಿ ಆರ್ಥಿಕ ನಷ್ಟ ಅನುಭವಿಸುತ್ತಿದ್ದು, ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಸರ್ಕಾರಗಳು ಒಂದುಕಡೆ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವುದರ ಕುರಿತು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೆ, ಮತ್ತೊಂದೆಡೆ ಲಾಕ್‌ಡೌನ್ ಅನ್ನು ಹಂತ ಹಂತವಾಗಿ ಸಡಿಲಗೊಳಿಸಿದೆ. ಅಲ್ಲದೆ, ಆರ್ಥಿಕ ಪರಿಸ್ಥಿತಿ ಸುಧಾರಿಸುವತ್ತಲೂ ಗಮನಹರಿಸುತ್ತಿವೆ.
ಅನ್ಲಾಕ್ ಪ್ರಕ್ರಿಯೆ ಶುರುವಾಗುತ್ತಿದ್ದಂತೆ ರಾಜ್ಯದ ಬೆಂಗಳೂರು, ಮೈಸೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಜನಸಂದಣಿ ಹೆಚ್ಚಾಗಿದೆ. ಇತ್ತ ವಾಹನ ದಟ್ಟಣೆ ಕೂಡ ಉಂಟಾಗುತ್ತಿದ್ದು, ಸವಾರರು ಸಂಚರಿಸಲು ನರಕಯಾತನೆ ಅನುಭವಿಸುತ್ತಿದ್ದಾರೆ. ಕೆಲ ನಿಯಮಗಳನ್ನು ವಿಧಿಸಿ ಬೆಂಗಳೂರಿನಲ್ಲಿ ಮೆಟ್ರೋ ಕೂಡ ಆರಂಭಿಸಲಾಗಿದೆ. ಅಕ್ಟೋಬರ್-15ರಿಂದ ಸಿನಿಮಾ ಪ್ರದರ್ಶನ, ಸ್ವಿಮ್ಮಿಂಗ್ ಪೂಲ್ಗಳು ತೆರೆಯಲು ಕೇಂದ್ರ ಸರ್ಕಾರ ಷರತ್ತು ಬದ್ದ ಅನುಮತಿ ನೀಡಿದೆ. ಪ್ಯಾಸೆಂಜರ್ ರೈಲುಗಳ ಸಂಚಾರ ಇನ್ನಷ್ಟೇ ಆರಂಭವಾಗಬೇಕಿದೆ. ಆದರೆ, ಕೆಲವೆಡೆ ಕೊರೊನಾ ಇಲ್ಲವೆನೋ ಎಂಬ ಭ್ರಮೆಯಲ್ಲಿ ಜನರು ಮಾಸ್ಕ್ ಧರಿಸುತ್ತಿಲ್ಲ. ಕನಿಷ್ಠ ಪಕ್ಷ ಸಾಮಾಜಿಕ ಅಂತರ ಸಹ ಕಾಪಾಡಿಕೊಳ್ಳುತ್ತಿಲ್ಲ. ಸ್ಯಾನಿಟೈಸರ್ ಬಳಕೆಯಂತೂ ಮುಟ್ಟೋದೆ ಇಲ್ಲ ಎನ್ನುವಷ್ಟರ ಮಟ್ಟಿಗೆ ಬೇಜವಾಬ್ದಾರಿತನ ತೋರುತ್ತಿದ್ದಾರೆ.
ರಾಜ್ಯದಲ್ಲಿ ದಾಖಲಾದ ಕೊರೊನಾ ಪ್ರಕರಣಗಳನ್ನು ಗಮನಿಸಿದರೆ ಅಪಾಯ ಗ್ಯಾರಂಟಿ ಎಂಬುದನ್ನು ಸೂಚಿಸುತ್ತದೆ. ಹೀಗಾಗಿ, ಬಸ್ ನಿಲ್ದಾಣ, ರೈಲು ಹಾಗೂ ಮೆಟ್ರೊ ನಿಲ್ದಾಣ, ಮಾಲ್, ಚಿತ್ರಮಂದಿರ ಸೇರಿದಂತೆ ಜನದಟ್ಟಣೆ ಪ್ರದೇಶಗಳಲ್ಲಿ ಕೊರೊನಾ ಕುರಿತು ಪ್ರಬಲವಾಗಿ ಜಾಗೃತಿ ಮೂಡಿಸುವ ಅಗತ್ಯವಿದೆ. ಇತ್ತ ಮಂಗಳೂರಿನಲ್ಲೂ ಅಷ್ಟೇ ಲಾಕ್ಡೌನ್ನಲ್ಲಿ ಜನ ಸಂಚಾರವಿಲ್ಲದೇ ಕೊರೊನಾ ಕಡಿಮೆಯಾಗಿದ್ದರೆ, ಅನ್ಲಾಕ್ ಬಳಿಕ ಜನ ಸಂಚಾರ ಹೆಚ್ಚಾದ ಕಾರಣ ಸೋಂಕಿತರ ಸಂಖ್ಯೆ ಅಧಿಕವಾಗಿದೆ. ಅದೇ ರೀತಿ ಮೈಸೂರಿನಲ್ಲೂ ಕೂಡ.
ಜಾಗೃತಿ ಮೂಡಿಸಿದರೂ ಎಚ್ಚೆತ್ತುಕೊಳ್ಳದ ಜನರಿಗೆ ಬಿಬಿಎಂಪಿ ಅಕ್ಟೋಬರ್ 2ರಿಂದ ಜಾರಿಯಾಗುವಂತೆ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಹೇಳಿದೆ. ಸಹಜ ಸ್ಥಿತಿಗೆ ಮರಳುತ್ತಿರುವ ಈ ಸಂದರ್ಭದಲ್ಲಿ ಜನರೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದು ಬಹಳ ಮುಖ್ಯ. ಅದಕ್ಕಾಗಿ ಸರ್ಕಾರ ಸೂಚಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ.