ದೊಡ್ಡಬಳ್ಳಾಪುರ : ವರದಕ್ಷಿಣೆ ಕಿರುಕುಳ ನೀಡಿ ಯುವತಿಯನ್ನು ಗಂಡ ಮತ್ತು ಮನೆಯವರು ಸೇರಿ ವಿಷ ಕುಡಿಸಿ ಕೊಲೆಗೈದಿರುವ ಆರೋಪ ತಾಲೂಕಿನ ಕಸಘಟ್ಟ ಗ್ರಾಮದಲ್ಲಿ ಕೇಳಿ ಬಂದಿದೆ.
ಗ್ರಾಮದ ಮೋನಿಷಾ(20) ಎಂಬ ಯುವತಿಗೆ 6 ತಿಂಗಳ ಹಿಂದೆ ಮುತ್ತೇಗೌಡ ಎಂಬುವನೊಂದಿಗೆ ಮದುವೆಯಾಗಿತ್ತು. ಒಬ್ಬಳೇ ಮಗಳೆಂಬ ಕಾರಣಕ್ಕೆ ಮೈತುಂಬ ಚಿನ್ನಾಭರಣ ಹಾಕಿ ಮದುವೆ ಮಾಡಿ ಕೊಡಲಾಗಿತ್ತು. ಆದರೂ ಮುತ್ತೇಗೌಡ ತವರಿನಿಂದ ಹಣ ತರುವಂತೆ ಹೆಂಡತಿಗೆ ಕಾಡುತ್ತಿದ್ದ ಎನ್ನಲಾಗಿದೆ.
ಇಷ್ಟಕ್ಕೆ ತೃಪ್ತನಾಗದ ಮುತ್ತೇಗೌಡ ಮೋನಿಷಾ ಪೋಷಕರು ವಾಸಿಸುತ್ತಿದ್ದ ಮನೆಯನ್ನೇ ಬರೆದು ಕೊಡುವಂತೆ ಬೇಡಿಕೆ ಇಟ್ಟಿದ್ದ. ಇದೇ ವಿಚಾರವಾಗಿ ನಾಲ್ಕೈದು ಬಾರಿ ನ್ಯಾಯ ಪಂಚಾಯತ್ ಮಾಡಲಾಗಿತ್ತು. ಆದರೂ ನಿಲ್ಲದ ಗಂಡನ ವರದಕ್ಷಿಣೆ ದಾಹಕ್ಕೆ ಬೇಸತ್ತ ಮೋನಿಷಾ ತವರಿಗೆ ಬಂದಿದ್ದಳು. ಕೆಲ ದಿನಗಳ ನಂತರ ಆಕೆಯನ್ನು ಗಂಡನ ಮನೆಗೆ ಬಿಟ್ಟು ಬರಲಾಗಿತ್ತು.
ಇಂದು ಬೆಳಗ್ಗೆ ಮೋನಿಷಾ ಮೂರ್ಛೆ ಬಂದು ಸಾವನ್ನಪ್ಪಿರುವುದಾಗಿ ಗಂಡನ ಮನೆ ಕಡೆಯವರು ತಿಳಿಸಿದ್ದಾರೆ. ಆದ್ರೆ, ಯುವತಿ ಕುಟುಂಬಸ್ಥರು ಬಲವಂತವಾಗಿ ವಿಷ ಕುಡಿಸಿ ಕೊಲೆಗೈದಿದ್ದಾರೆ ಎಂದು ಆರೋಪಿಸಿದ್ದಾರೆ.
ಸದ್ಯ ಮುತ್ತೇಗೌಡ, ಅವರ ತಾಯಿ ಶಾರದಮ್ಮ, ಮಾವ ಶಿವಕುಮಾರ್, ನಾದಿನಿ ಸುಧಾ ಮತ್ತು ರಾಮೇಗೌಡ ಎಂಬುವವರ ವಿರುದ್ದ ದೊಡ್ಡ ಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.