ಬೆಂಗಳೂರು: ಲಾಕ್ಡೌನ್ನಿಂದ ಹೋಟೆಲ್ ಉದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದ್ದು, ಆಸ್ತಿ ತೆರಿಗೆ, ಬೆಸ್ಕಾಂ, ಜಲಮಂಡಳಿ ಬಿಲ್, ಅಬಕಾರಿ ಲೈಸೆನ್ಸ್ ಸುಂಕ ರಿಯಾಯಿತಿ ಸೆರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಹೋಟೆಲ್ ಸಂಘ ಸರ್ಕಾರಕ್ಕೆ ಮನವಿ ಮಾಡಿದೆ.
ಆಸ್ತಿ ತೆರಿಗೆಗೆ ಒಂದು ವರ್ಷ ವಿನಾಯಿತಿ, ಮೂರು ತಿಂಗಳು ಜಲಮಂಡಳಿ ಬಿಲ್ ಮನ್ನಾ, ಬಾರ್ ಆಂಡ್ ರೆಸ್ಟೋರೆಂಟ್ಗಳ ಅಬಕಾರಿ ಲೈಸೆನ್ಸ್ ಸುಂಕ ವರ್ಷಕ್ಕೆ ಹತ್ತು ಲಕ್ಷ ಬರುತ್ತಿದ್ದು, ಕಳೆದ ವರ್ಷವೂ ಬಂದ್ ಇದ್ದರೂ ರಿಯಾಯಿತಿ ಸಿಕ್ಕಿಲ್ಲ. ಜೂನ್ನಲ್ಲಿ ಲೈಸೆನ್ಸ್ ಶುಲ್ಕ ಮತ್ತೆ ಕಟ್ಟಲಿದ್ದು, ಕನಿಷ್ಠ ಆರು ತಿಂಗಳ ಲೈಸೆನ್ಸ್ ಶುಲ್ಕ ವಿನಾಯಿತಿ ಬೇಕೆಂದು ಮನವಿ ಸಂಘ ಮನವಿ ಮಾಡಿದೆ.
ಸುಮಾರು 60-70 ಲಕ್ಷ ಹೋಟೇಲ್ ಕಾರ್ಮಿಕರು ಬೀದಿಪಾಲಾಗಿದ್ದಾರೆ. ಹೋಟೆಲ್ ಕಾರ್ಮಿಕರ ಕುಟುಂಬಗಳು ಕಷ್ಟದಲ್ಲಿವೆ. ಅದಕ್ಕಾಗಿ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಬೇಕು. ಪ್ರವಾಸೋದ್ಯಮ ಜಿಲ್ಲೆಗಳಲ್ಲಿರುವ ಹೋಟೆಲ್, ರೆಸ್ಟೋರೆಂಟ್, ಲಾಡ್ಜಿಂಗ್ಗಳಿಗೆ ಯಾವುದೇ ರೀತಿಯ ವ್ಯಾಪಾರ ನಡೆದಿಲ್ಲ. ಈ ಟೂರಿಸಂ ವ್ಯಾಪ್ತಿಯವರಿಗೆ ವಿಶೇಷ ಪ್ಯಾಕೇಜ್ ನೀಡಬೇಕಿದೆ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ ಎಂದು ತಿಳಿಸಿದೆ.
ಕರ್ನಾಟಕ ರಾಜ್ಯ ಹೋಟೆಲ್ ಸಂಘದ ಕಾರ್ಯದರ್ಶಿ ಮಧುಕರ್ ಶೆಟ್ಟಿ ಮಾತನಾಡಿ, ರಾಜ್ಯದ ಸುಮಾರು 1.50 ಲಕ್ಷಕ್ಕೂ ಅಧಿಕ ಹೋಟೆಲ್ ಮತ್ತು ರೆಸ್ಟೋರೆಂಟ್ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿವೆ. ಕಳೆದ ಒಂದೂವರೇ ವರ್ಷದಿಂದ ವ್ಯಾಪಾರದಲ್ಲಿ ಚೇತರಿಕೆ ಕಾಣದೆ, ಸಾಲ ಮಾಡಿಕೊಂಡಿದ್ದಾರೆ. 30-40% ಮಾಲೀಕರು ತಮ್ಮ ಹೋಟೆಲ್, ಸಂಸ್ಥೆಯನ್ನು ಮುಚ್ಚಿ ದಿಕ್ಕು ಪಾಲಾಗಿದ್ದಾರೆ ಎಂದರು.
ಲಾಕ್ಡೌನ್ ವಿಸ್ತರಣೆಯಿಂದ ನಮ್ಮ ಪರಿಸ್ಥಿತಿ ಅಧೋಗತಿಯಾಗಿದೆ. ಬೇರೆಯವರಿಗೆ ಸರ್ಕಾರ ಪ್ಯಾಕೇಜ್ ಘೋಷಿಸಿರುವಂತೆ ಹೋಟೆಲ್ನವರಿಗೂ ಪ್ಯಾಕೇಜ್ ಸಿಗಲಿ. ಅದೇ ರೀತಿ ಈಗಾಗಲೇ ಕೊಟ್ಟಿರುವ ಮನವಿಗಳನ್ನು ಈಡೇರಿಸಲಿ ಎಂದರು.