ಬೆಂಗಳೂರು : ಲಾಕ್ಡೌನ್ ಕೇಳಿದ ಜಿಲ್ಲೆಗಳಿಗೆ ಅನುಮತಿ ನೀಡಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೆ, ಆಯಾ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರ, ಗ್ರಾಮಾಂತರವನ್ನು ರಾಜ್ಯ ಸರ್ಕಾರವೇ ಒಂದು ವಾರ ಲಾಕ್ಡೌನ್ ಮಾಡಿದೆ. ಧಾರವಾಡ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಲಾಕ್ಡೌನ್ಗೆ ಅನುಮತಿ ಕೇಳಿದ್ದು, ಅದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಒಂದು ವಾರದ ಲಾಕ್ಡೌನ್ ಮೊದಲ ಲಾಕ್ಡೌನ್-1 ರೀತಿ ಇರಲಿದೆ. ಬಿಗಿ ಬಂದೋಬಸ್ತ್, ಹೆಚ್ಚಿನ ನಿಗಾವಹಿಸಲು ಸೂಚಿಸಿದ್ದೇವೆ. ಸೀಲ್ಡೌನ್ ಪ್ರದೇಶವನ್ನು ಸಂಪೂರ್ಣ ಬಂದ್ ಮಾಡುತ್ತೇವೆ. ದಿನಸಿ ಅಂಗಡಿ ಮಧ್ಯಾಹ್ನ 12 ಗಂಟೆ ತನಕ ಮಾತ್ರ ತೆರೆದಿರುತ್ತವೆ ಎಂದರು.
ಲಾಕ್ಡೌನ್ಗೆ ಕೆಲವು ಜಿಲ್ಲೆಗಳು ಮಾತ್ರ ಕೇಳಿದ್ದವು. ಅವರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಜಿಲ್ಲೆಗಳ ಗಡಿ ಭಾಗಗಳನ್ನು ಮಾಡಲು ಅನುಮತಿ ಕೇಳಿದ್ದು, ಅದಕ್ಕೆ ಅವಕಾಶ ಕಲ್ಪಿಸಿದ್ದೇನೆ. ಅಗತ್ಯ ಸೇವೆಗಳ ಸಂಚಾರಕ್ಕೆ ಮಾತ್ರ ಗಡಿ ಪ್ರವೇಶಕ್ಕೆ ಸೂಚಿಸಿದ್ದೇವೆ, ಗಡಿಗಳನ್ನು ಬಂದ್ ಮಾಡಲು ಆಯಾ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಕೊಟ್ಟಿದ್ದೇವೆ. ಅವರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ವೈದ್ಯಕೀಯ ಕ್ಷೇತ್ರದ ಕಂಪನಿಗಳು, ರಫ್ತು ಮಾಡುವ ಮುಖ್ಯ ಕಾರ್ಖಾನೆಗಳು, ಆಹಾರ ಸಂಸ್ಕರಣಾ ಘಟಕಗಳು ಸೇರಿ ಕೆಲವಕ್ಕೆ ವಿನಾಯಿತಿ ನೀಡಲಾಗಿದೆ. ಅವು ಲಾಕ್ಡೌನ್ ಅವಧಿಯಲ್ಲೂ ಕಾರ್ಯಾರಂಭ ನಡೆಸಲಿವೆ ಎಂದು ಮಾಹಿತಿ ನೀಡಿದರು.