ಬೆಂಗಳೂರು: ಬಣ ರಾಜಕೀಯದ ಕೇಂದ್ರಬಿಂದುವಾಗಿ ಗುರುತಿಸಿಕೊಂಡಿರುವ ಶಾಸಕ ಅರವಿಂದ ಬೆಲ್ಲದ್ ಜೊತೆಗಿನ ಭೇಟಿ ಹಾಗೂ ಮಾತುಕತೆ ವಿವರಗಳನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನೀಡಿದ್ದಾರೆ. ಇಂದು ಬೆಳಗ್ಗೆ ಸಿಎಂ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ ಗೃಹ ಸಚಿವ ಬೊಮ್ಮಾಯಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದು, ಪ್ರಸಕ್ತ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ಸಮಾಲೋಚನೆ ನಡೆಸಿದರು.
ನವದೆಹಲಿಗೆ ತೆರಳಿದ್ದ ರೆಬಲ್ ಶಾಸಕ ಅರವಿಂದ ಬೆಲ್ಲದ್ ವಾಪಸ್ಸಾಗುತ್ತಿದ್ದಂತೆ ಕಳೆದ ರಾತ್ರಿ ಗೃಹ ಸಚಿವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದರು. ಈ ವಿವರವನ್ನು ಸಿಎಂ ಗಮನಕ್ಕೆ ತಂದರು. ಮಾತುಕತೆ ವೇಳೆ ನಡೆದ ಎಲ್ಲ ಮಾಹಿತಿಯನ್ನು ಅವರು ಸಿಎಂಗೆ ತಿಳಿಸಿದ್ದಾರೆ. ಗೃಹ ಸಚಿವರ ಭೇಟಿಗೂ ಮೊದಲು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ರನ್ನು ಬೆಲ್ಲದ್ ಭೇಟಿ ಮಾಡಿದ್ದರು. ದೆಹಲಿಗೆ ಹೋಗುವ ಮೊದಲೂ ಭೇಟಿ ಮಾಡಿ ವಾಪಸ್ ಬಂದ ನಂತರವೂ ಭೇಟಿ ಮಾಡಿದ್ದರು. ನಂತರ ಗೃಹ ಸಚಿವರನ್ನು ಭೇಟಿ ಮಾಡಿದ್ದರು. ಈ ಅಂಶದ ಕುರಿತು ಬೆಲ್ಲದ್ ಜೊತೆ ಬೊಮ್ಮಾಯಿ ಮಾತುಕತೆ ನಡೆಸಿದ್ದು, ಅದರ ಮಾಹಿತಿಯನ್ನೂ ಸಿಎಂ ಗಮನಕ್ಕೆ ತಂದರು.
ಇಂದು ಸಂಜೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸುತ್ತಿದ್ದು, ಸಚಿವರ ಸಭೆ ಕರೆದಿದ್ದಾರೆ. ಸಚಿವರ ಸಭೆ ಕುರಿತು ಸಿಎಂ ಜೊತೆ ಬೊಮ್ಮಾಯಿ ಚರ್ಚಿಸಿದ್ದರು. ಸಭೆಯಲ್ಲಿ ಏನೆಲ್ಲಾ ಚರ್ಚೆ ನಡೆಸಬೇಕು ಎನ್ನುವ ಕುರಿತು ಸಮಾಲೋಚನೆ ನಡೆಸಿದರು.
ಒನ್ ಟು ಒನ್ಗೆ ಶಾಸಕರ ಹಿಂದೇಟು:
ಇನ್ನು ನಾಯಕತ್ವದ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದ ಶಾಸಕರು ಇದೀಗ ಅರುಣ್ ಸಿಂಗ್ ರನ್ನು ಒನ್ ಟು ಒನ್ ಪ್ರತ್ಯೇಕವಾಗಿ ಭೇಟಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಯತ್ನಾಳ್, ಬೆಲ್ಲದ್ ಬಿಟ್ಟರೆ ಬೇರೆ ಯಾರೂ ಅರುಣ್ ಸಿಂಗ್ರನ್ನು ಭೇಟಿಯಾಗಿ ದೂರು ನೀಡುವುದು, ಸಿಎಂ ವಿರುದ್ಧವಾಗಿ ಮಾತನಾಡುವ ಸಾಧ್ಯತೆ ಕಡಿಮೆ ಇದ್ದು, ಗುಂಪಾಗಿ ಬರಲು ಸಿದ್ದರಿರುವ ಶಾಸಕರು ಪ್ರತ್ಯೇಕವಾಗಿ ಬರಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಬೊಮ್ಮಾಯಿ ಸಿಎಂ ಗಮನಕ್ಕೆ ತಂದರು.
ಇದನ್ನೂ ಓದಿ: ಬಿಜೆಪಿ ಶಾಸಕರಿಗೆ ಖಡಕ್ ಸೂಚನೆ: ಬಣಗಳ ಶಕ್ತಿ ಪ್ರದರ್ಶನಕ್ಕೆ ಅರುಣ್ ಸಿಂಗ್ ಕಡಿವಾಣ