ಬೆಂಗಳೂರು: ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಗಂಟೆಯೊಳಗೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ದಿನಾಚರಣೆ ಅಂಗವಾಗಿ ಮುನ್ನಾ ದಿನವಾದ ಇಂದು ಪೊಲೀಸ್ ಇಲಾಖೆಯ ಕೆಎಸ್‌ಆರ್‌ಪಿ ಘಟಕದ ವತಿಯಿಂದ ನಗರದಲ್ಲಿ ಐಕ್ಯತೆ & ದೈಹಿಕ ಸದೃಢತೆಗಾಗಿ ಸ್ವಾತಂತ್ರ್ಯ ಓಟ-2021 (10 ಕಿ.ಮೀ) ಆಯೋಜಿಸಲಾಗಿತ್ತು. ರಾಷ್ಟ್ರೀಯ ಐಕ್ಯತೆ, ದೈಹಿಕ ಮತ್ತು ಮಾನಸಿಕ ಸದೃಢತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಓಟದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ನಮ್ಮ ಪೊಲೀಸರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಜೈಲಿಗಟ್ಟಿದ್ದಾರೆ ಎಂದು ಹೇಳಿದರು.
ರಾಜಧಾನಿಯಲ್ಲಿ ವೀಕೆಂಡ್ ಲಾಕ್ಡೌನ್ ವಿಚಾರವಾಗಿ ಮಾತನಾಡಿ, ಇದರ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಆರೋಗ್ಯ ಸಚಿವರು ಈ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು.
ವೀಸಾ ಅವಧಿ ಮುಗಿದ ವಿದೇಶಿ ಪ್ರಜೆಗಳನ್ನು ವಾಪಸ್ ಕಳುಹಿಸಲಾಗುತ್ತದೆ. ಕೆಲವು ಕಾನೂನು ತೊಡಕುಗಳಿದ್ದು, ಈ ಕುರಿತು ಪರಿಶೀಲನೆ ನಡೆಸಿ ವೀಸಾ ಪಾಸ್ ಪೋರ್ಟ್ ಅವಧಿ ಮುಗಿದವರನ್ನು ವಾಪಸ್ ಕಳಿಸಿರುವ ಕೆಲಸ ಮಾಡಲಾಗುವುದು ಎಂದರು.
ಮೀಸಲು ಪೊಲೀಸರಿಗೆ ಸಿವಿಲ್ ಅವಕಾಶ:
ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಈ ಸಂದರ್ಭದಲ್ಲಿ ಮಾತನಾಡಿ, ಪೊಲೀಸ್ ಇಲಾಖೆಗೆ ಡಿಗ್ರಿ ಓದಿರುವವರು, ಇಂಜಿನಿಯರಿಂಗ್, ಮಾಸ್ಟರ್ ಆಫ್ ಕಾಮರ್ಸ್, ಎಂ.ಎಸ್.ಸಿ ಸೇರಿ ಉನ್ನತ ಮಟ್ಟದ ವಿದ್ಯಾವಂತರು ಸೇರುತ್ತಿದ್ದಾರೆ. ಹೀಗಾಗಿ ಕೆ.ಎಸ್.ಆರ್.ಪಿ ಯಿಂದ ಸಿವಿಲ್ ವಿಭಾಗಕ್ಕೆ ಅವಕಾಶ ನೀಡಲಾಗುವುದು. ಗೃಹ ಇಲಾಖೆಯಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಸಿ.ಎ.ಆರ್ ಹಾಗೂ ಡಿ.ಎ.ಆರ್ ಸಿಬ್ಬಂದಿಗೆ ಕೆ.ಎಸ್.ಆರ್.ಪಿ ಅನ್ವಯವಾಗಲಿದೆ. ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರುವವರಿಗೆ ಇಲಾಖೆ ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು.
ಒಟ್ಟು ಶೇ 10 % ಮೀಸಲಾತಿ ಮೂಲಕ 2 % ಕ್ರೀಡಾ ಕೋಟಾದಡಿ ಅವಕಾಶ ನೀಡುತ್ತೇವೆ. ಸಿವಿಲ್, ವೈರ್ ಲೆಸ್ ಹಾಗೂ ಫಿಂಗರ್ ಪ್ರಿಂಟ್ ವಿಭಾಗದಲ್ಲಿ ಅವಕಾಶ ಕೊಡಲಾಗುವುದು. ಆಯ್ಕೆ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದರು.