ಬೆಂಗಳೂರು: ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ಗೌರವಯುತವಾಗಿರಬೇಕು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಮೃತದೇಹಗಳನ್ನು ನಿರ್ವಹಣೆ ಮಾಡುವ ಕುರಿತು ವಿವರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಈ ಕುರಿತು ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಗಳ ಪೀಠ ಸರ್ಕಾರಕ್ಕೆ ಈ ಸೂಚನೆ ನೀಡಿದೆ. ವಿಚಾರಣೆ ವೇಳೆ ಕೋವಿಡ್ಗೆ ತುತ್ತಾಗಿ ಸಾವನ್ನಪ್ಪಿದವರ ಮೃತದೇಹಗಳನ್ನು ನಿಕೃಷ್ಟವಾಗಿ ಕಾಣಲಾಗುತ್ತಿದೆ. ಮೃತದೇಹವನ್ನು ಸುರಕ್ಷತಾ ಕ್ರಮಗಳೊಂದಿಗೆ ಬಂಧುಗಳಿಗೆ ನೀಡುವಂತೆ ಮಾರ್ಗಸೂಚಿ ಇದ್ದರೂ ಆಸ್ಪತ್ರೆ ಸಿಬ್ಬಂದಿ ಸ್ಪಂದಿಸುತ್ತಿಲ್ಲ. ಇತ್ತೀಚೆಗೆ ನಮ್ಮ ಸಂಬಂಧಿಕರೊಬ್ಬರು ಮೃತಪಟ್ಟಿದ್ದರು. ಅವರ ಮೃತದೇಹ ಪಡೆದುಕೊಳ್ಳಲು ಹೋದಾಗ ಆಸ್ಪತ್ರೆ ಸಿಬ್ಬಂದಿ, ಮುಖ ನೋಡಲಿಕ್ಕೂ ಬಿಡಲಿಲ್ಲ ಎಂದು ವಿವರಿಸಿದರು.
ಅಲ್ಲದೆ ಬೆಳಗಾವಿ, ರಾಯಚೂರು, ಬಳ್ಳಾರಿ ಸೇರಿದಂತೆ ಹಲವೆಡೆ ಕೋವಿಡ್ನಿಂದ ಸಾವನ್ನಪ್ಪಿದವರ ಮೃತದೇಹಗಳನ್ನು ಅತ್ಯಂತ ಕೆಟ್ಟದಾಗಿ ಹೂಳಲಾಗುತ್ತಿದೆ. ಜೆಸಿಬಿ ಮೂಲಕ ಗುಂಡಿ ತೋಡಿ ಅದರೊಳಗೆ ಬಿಸಾಡಲಾಗುತ್ತಿದೆ. ನಗರದಲ್ಲಿ ನಿತ್ಯವೂ 10ರಿಂದ 12 ಜನರು ಕೋವಿಡ್ನಿಂದ ಸಾವನ್ನಪ್ಪುತ್ತಿದ್ದು, ಮೃತದೇಹಗಳನ್ನು ವಿದ್ಯುತ್ ಚಿತಾಗಾರಗಳಲ್ಲಿ ದಹಿಸಲಾಗುತ್ತಿದೆ. ಇಲ್ಲಿಗೆ ಯಾವುದೇ ಸಂಬಂಧಿಕರನ್ನು ಬಿಡುತ್ತಿಲ್ಲ. ಸರ್ಕಾರದ ನಿಯಮಗಳು, ನೋಟಿಫಿಕೇಷನ್ಗಳು ಕೇವಲ ಪೇಪರ್ ಮೇಲೆ ಮಾತ್ರ ಇವೆ. ಆದರೆ ವಾಸ್ತವದಲ್ಲಿ ಯಾವುದನ್ನೂ ಪಾಲಿಸಲಾಗುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಮಸ್ಯೆಯನ್ನು ಕೋರ್ಟ್ ಮುಂದೆ ತಂದಾಗ ಮಾತ್ರ ಕಡತಗಳಲ್ಲಿರುವ ನಿಯಮಗಳನ್ನು ಅಧಿಕಾರಿಗಳು ಕೋರ್ಟ್ ಮುಂದೆ ತಂದಿಡುತ್ತಿದ್ದಾರೆ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಇದೊಂದು ಮುಖ್ಯವಾದ ವಿಚಾರ. ಅಂತ್ಯಕ್ರಿಯೆ ಗೌರವಯುತವಾಗಿ ನಡೆಸಬೇಕು ಎಂದಿದೆ. ಜೊತೆಗೆ ಸರ್ಕಾರ ಮತ್ತು ಬಿಬಿಎಂಪಿ ಪರ ವಕೀಲರನ್ನು ಪ್ರಶ್ನಿಸಿ, ಯಾರಾದರೂ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದರೆ ಮೃತದೇಹವನ್ನು ಹೇಗೆ ನಿರ್ವಹಿಸುತ್ತೀರಿ, ವ್ಯಕ್ತಿಯೊಬ್ಬ ಮನೆಯಲ್ಲಿ ಸಾವನ್ನಪ್ಪಿದರೆ ನಿರ್ವಹಣೆ ಮಾಡುವ ಕ್ರಮಗಳೇನು, ಆಸ್ಪತ್ರೆಯಲ್ಲಿ ಮೃತಪಟ್ಟಾಗ ನಿರ್ವಹಣೆ ಹೇಗೆ, ಒಂದು ವೇಳೆ ಮೃತರು ಅಪರಿಚಿತರಾಗಿದ್ದರೆ, ಮೃತದೇಹವನ್ನು ಯಾರೊಬ್ಬರೂ ಪಡೆದುಕೊಳ್ಳಲು ಮುಂದೆ ಬರದಿದ್ದರೆ ನಿರ್ವಹಣೆ ಹೇಗೆ ಎಂದು ಪೀಠ ಪ್ರಶ್ನಿಸಿತು.
ಇದಕ್ಕೆ ಉತ್ತರಿಸಿದ ಪಾಲಿಕೆ ಪರ ವಕೀಲರು, ಇವೆಲ್ಲಕ್ಕೂ ನಿಯಮಗಳನ್ನು ರೂಪಿಸಲಾಗಿದೆ. ಸದ್ಯಕ್ಕೆ ಅದರ ಪ್ರತಿ ಲಭ್ಯವಿಲ್ಲ. ಪಡೆದುಕೊಂಡು ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ ಮುಂದಿನ ಕಲಾಪದ ವೇಳೆ ಮೃತದೇಹ ನಿರ್ವಹಣೆ ಕುರಿತು ಇರುವ ನಿಯಮಗಳನ್ನು ಸಲ್ಲಿಸುವಂತೆ ಸೂಚಿಸಿ, ಜುಲೈ 27ಕ್ಕೆ ವಿಚಾರಣೆ ಮುಂದೂಡಿದೆ.