ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಉದ್ಭವಿಸಿರುವ ಮುಂದಿನ ಸಿಎಂ ಕುರಿತಾದ ಚರ್ಚೆಗೆ ತಮ್ಮ ವಿವರಣೆ ಒದಗಿಸಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶೀಘ್ರವೇ ದೆಹಲಿಗೆ ತೆರಳಲಿದ್ದಾರೆ. ಮೂರು ದಿನಗಳ ದೆಹಲಿ ಪ್ರವಾಸ ಮುಗಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರಾಜ್ಯಕ್ಕೆ ವಾಪಸಾಗಿದ್ದು, ಇದೀಗ ಮುಂದಿನವಾರ ಸಿದ್ದರಾಮಯ್ಯ ಪ್ರಯಾಣ ಬೆಳೆಸಲಿದ್ದಾರೆ ಎಂಬ ಮಾಹಿತಿ ಕೇಳಿ ಬಂದಿದೆ.
ಚುನಾವಣೆಗೆ ಇನ್ನೂ ಎರಡು ವರ್ಷ ಇರುವಾಗಲೇ ಮುಂದಿನ ಸಿಎಂ ಯಾರು ಎಂಬ ಕುರಿತು ಕಾಂಗ್ರೆಸ್ ಪಕ್ಷದಲ್ಲಿ ಚರ್ಚೆ ಆರಂಭವಾಗಿದೆ. ಒಂದೊಮ್ಮೆ 2023 ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿಎಂ ಯಾರು ಎನ್ನುವುದನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ. ಅಲ್ಲಿಯವರೆಗೂ ಸಿಎಂ ಸ್ಥಾನದ ಕುರಿತು ಪಕ್ಷದ ಕಾರ್ಯಕರ್ತರಾಗಲು ಮುಖಂಡರಾಗಲಿ ಅಥವಾ ಶಾಸಕರಾಗಲಿ ಯಾವುದೇ ಹೇಳಿಕೆ ನೀಡಬಾರದು.
ಪ್ರಚೋದನಾಕಾರಿ ಹೇಳಿಕೆ ನೀಡುವುದು ಕಾಂಗ್ರೆಸ್ ಪಕ್ಷದಲ್ಲಿ ನಿಷಿದ್ಧ. ಆದರೆ, ಕಳೆದ ಒಂದೆರಡು ವಾರದಲ್ಲಿ ಕಾಂಗ್ರೆಸ್ನ ಐದಕ್ಕೂ ಹೆಚ್ಚು ಶಾಸಕರು ಹಾಗೂ ಓರ್ವ ಮಾಜಿ ಸಚಿವರು ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಹೇಳಿಕೆಯನ್ನು ಸಾರ್ವಜನಿಕ ವೇದಿಕೆಯಲ್ಲಿ ನೀಡಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಕಾನೂನಿಗೆ ವಿರುದ್ಧವಾದದ್ದು. ದೆಹಲಿಯಿಂದ ವಾಪಸಾಗಿರುವ ಕೆಪಿಸಿಸಿ ಅಧ್ಯಕ್ಷರಿಗೆ ಮಾಹಿತಿಯನ್ನು ನೀಡಿ ಕಳುಹಿಸಲಾಗಿದೆ.
ಇದೀಗ ಹೈಕಮಾಂಡ್ ನಾಯಕರು ಸಿದ್ದರಾಮಯ್ಯ ಅವರಿಗೂ ಬರುವಂತೆ ಸೂಚಿಸಿದ್ದು, ಯಾವುದೇ ರೀತಿ ಮುಂದಿನ ಸಿಎಂ ಯಾರು ಎಂಬ ಕುರಿತು ಎರಡು ವರ್ಷ ಹೇಳಿಕೆ ನೀಡದಂತೆ ತಮ್ಮ ಆಪ್ತ ಶಾಸಕರಿಗೆ ಸೂಚನೆ ನೀಡುವಂತೆ ಮಾಡುವ ಸಾಧ್ಯತೆ ಇದೆ.
ಕಾಂಗ್ರೆಸ್ ಪಕ್ಷದಲ್ಲಿ 10ಕ್ಕೂ ಹೆಚ್ಚು ನಾಯಕರು ಸಿಎಂ ಸ್ಥಾನದ ಆಕಾಂಕ್ಷಿಗಳಾಗಿದ್ದು, ತಮ್ಮದೇ ಆದ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದಾರೆ. ಆದರೆ, ಇದೀಗ ಕೆಲ ಶಾಸಕರು ಸಿದ್ದರಾಮಯ್ಯ ಮುಂದಿನ ಸಿಎಂ ಎಂಬ ಹೇಳಿಕೆಯನ್ನು ನೀಡುವ ಮೂಲಕ ರಾಜ್ಯದ ಜನತೆಗೆ ಪ್ರಚೋದನೆ ಮೂಡಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಸಾಧ್ಯವಾದಷ್ಟು ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ನಡೆಸಿ, ಯಾರ ಪರಿಶ್ರಮಕ್ಕೆ ಹೆಚ್ಚಿನ ಬೆಲೆ ಸಿಗುತ್ತದೆಯೋ ಅಂತವರನ್ನು ಸಿಎಂ ಎಂದು ಘೋಷಿಸುವುದಾಗಿ ಪಕ್ಷದ ಹೈಕಮಾಂಡ್ ಈಗಾಗಲೇ ಸಿಎಂ ಸ್ಥಾನ ಆಕಾಂಕ್ಷೆಗಳಿಗೆ ಸೂಚಿಸಿದೆ. ಆದಾಗ್ಯೂ ಸಿದ್ದರಾಮಯ್ಯ ಪರ ಕೇಳಿ ಬರುತ್ತಿರುವ ಕೂಗಿಗೆ ಒಂದು ಕಡಿವಾಣ ಹಾಕಲು ಪಕ್ಷದ ಹೈಕಮಾಂಡ್ ತೀರ್ಮಾನಿಸಿದೆ.
ಸಿದ್ದರಾಮಯ್ಯ ಮಾಜಿ ಸಿಎಂ ಜೊತೆಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದಾರೆ. ಈ ಹಿನ್ನೆಲೆ ಅವರನ್ನು ದೆಹಲಿಗೆ ಕರೆಸಿಕೊಂಡು ಚರ್ಚಿಸಿ ಸೌಹಾರ್ದಯುತವಾಗಿ ಸಮಸ್ಯೆ ಪರಿಹರಿಸಿಕೊಳ್ಳಲು ಪಕ್ಷದ ಹೈಕಮಾಂಡ್ ತೀರ್ಮಾನಿಸಿದೆ. ಸಿದ್ದರಾಮಯ್ಯ ಪರ ದನಿಯೆತ್ತಿರುವ ಜಮೀರ್ ಅಹಮದ್ ಹಾಗೂ ಬಸವರಾಜ ಹಿಟ್ನಾಳ್ಗೆ ಈಗಾಗಲೇ ಎಐಸಿಸಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ದೂರವಾಣಿ ಕರೆಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ, ಇಷ್ಟಾಗಿಯೂ ಸಿದ್ದರಾಮಯ್ಯ ಪರ ದನಿ ಎತ್ತುವವರ ಕೂಗು ನಿಂತಿಲ್ಲ.
ಶಾಸಕರಾದ ಜಮೀರ್ ಅಹಮದ್, ಅಖಂಡ ಶ್ರೀನಿವಾಸಮೂರ್ತಿ, ಭೀಮ ನಾಯಕ್, ರಾಮಪ್ಪ, ತುಕಾರಾಂ, ಬಸವರಾಜ್ ಹಿಟ್ನಾಳ್, ಕಂಪ್ಲಿ ಗಣೇಶ್, ಮಾಜಿ ಸಚಿವ ಬಸವರಾಜ ರಾಯರಡ್ಡಿ ಸೇರಿದಂತೆ ಸಾಕಷ್ಟು ಮಂದಿ ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೆ ನೀಡುತ್ತಿದ್ದಾರೆ.
ಶಾಸಕರು ಹೇಳಿದರೆ ನಾನೇನು ಮಾಡೋದಕ್ಕೆ ಆಗುವುದಿಲ್ಲ
ಇಂದು ತಮ್ಮ ನಿವಾಸದ ಬಳಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಿದ್ದರಾಮಯ್ಯ, ಶಾಸಕರ ಹೇಳಿಕೆಗೆ ನಾನೇನು ಮಾಡುವುದಕ್ಕೆ ಆಗೋದಿಲ್ಲ. ನನಗೂ ಶಾಸಕರ ಹೇಳಿಕೆಗೆ ಸಂಬಂಧವಿಲ್ಲ. ಶಾಸಕರ ಮೇಲೆ ಸಿದ್ದರಾಮಯ್ಯ ಕ್ರಮ ತೆಗದುಕೊಳ್ತಾರೆ ಅಂತ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಅವರೇನೋ ಹೇಳಿದ್ರೆ ನಾನೇನು ಮಾಡೋಕೆ ಆಗುತ್ತೆ ಎಂದು ಹೇಳಿದ್ದಾರೆ.
ಇಂದು ಸಂಜೆ ತಮ್ಮ ನಿವಾಸದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಪ್ರತಿಯೊಬ್ಬ ನಾಗರಿಕರು ರಾಜ್ಯದಲ್ಲಿ ಬದಲಾವಣೆಯಾಗಬೇಕೆಂದು ನಿರೀಕ್ಷಿಸುತ್ತಿದ್ದಾರೆ. ಅದಕ್ಕೆ ನಾವು ಒಂದಾಗಿ ಕೆಲಸ ಮಾಡಬೇಕು. ಸಿಎಂ ವಿಚಾರವಾಗಿ ನಡೆಯುತ್ತಿರುವ ಚರ್ಚೆಯನ್ನು ಶಾಸಕಾಂಗ ಪಕ್ಷದ ನಾಯಕರು ನೋಡಿಕೊಳ್ಳುತ್ತಾರೆ. ಇಲ್ಲ ಅಂದರೆ ಕಾಂಗ್ರೆಸ್ ಪಕ್ಷ ಬದುಕಿದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಒಟ್ಟಾರೆ ಮುಂದಿನ ಸಿಎಂ ಯಾರು ಎಂಬ ವಿಚಾರವಾಗಿ ಕಾಂಗ್ರೆಸ್ನ ರಾಜ್ಯ ನಾಯಕರಲ್ಲಿ ಸಾಕಷ್ಟು ಆಂತರಿಕ ಕಲಹ ಆರಂಭವಾಗಿದ್ದು, ಇದನ್ನು ಆದಷ್ಟು ಬೇಗ ಚಿವುಟಿ ಹಾಕುವ ಪ್ರಯತ್ನಕ್ಕೆ ಮುಂದಾಗಿದೆ. ಮುಂದಿನ ವಾರವೇ ಸಿದ್ದರಾಮಯ್ಯ ದೆಹಲಿಗೆ ತೆರಳುವ ಸಾಧ್ಯತೆ ಹೆಚ್ಚಿದೆ.