ಬೆಂಗಳೂರು: ಕಾಗದಕ್ಕೆ ಲ್ಯಾಮಿನೇಷನ್ ಮಾಡಿ ಕೊಡುತ್ತಿದ್ದ ಕಪ್ಪು ಬಿಳುಪಿನ ಮತದಾರರ ಗುರುತಿನ ಚೀಟಿಗೆ ಚುನಾವಣಾ ಆಯೋಗ ಗುಡ್ ಬೈ ಹೇಳಿದ್ದು, ವೋಟರ್ ಐಡಿಗಳಿಗೆ ಸ್ಮಾರ್ಟ್ ಕಾರ್ಡ್ ಸ್ಪರ್ಶ ನೀಡಿದೆ.
ಮತದಾರರ ಗುರುತಿನ ಚೀಟಿಗೆ ಹೈಟೆಕ್ ಸ್ಪರ್ಶ ನೀಡಿರುವ ಚುನಾವಣಾ ಆಯೋಗ, ದೇಶದಲ್ಲೇ ಮೊದಲ ಬಾರಿಗೆ ಬಾರ್ ಕೋಡ್ ಹೊಂದಿರುವ ಸ್ಮಾರ್ಟ್ ಕಾರ್ಡ್ಗಳನ್ನು ಬಿಡುಗಡೆ ಮಾಡಿದೆ. ಎಟಿಎಂ ಕಾರ್ಡ್, ಪ್ಯಾನ್ ಕಾರ್ಡ್ ರೀತಿಯಲ್ಲೇ ಎಪಿಕ್ ಕಾರ್ಡ್ ಇರಲಿದೆ.
ಈವರೆಗೆ ಇರುತ್ತಿದ್ದ ವ್ಯಕ್ತಿಗಳ ಕಪ್ಪುಬಿಳುಪಿನ ಫೋಟೋ ಜಾಗದಲ್ಲಿ ಬಣ್ಣದ ಫೋಟೋ ಬರಲಿದೆ. ಇದರಿಂದ ವ್ಯಕ್ತಿಯ ಗುರುತು ಸರಿಯಾಗಿ ಸಿಗಲಿದೆ. ಬಾರ್ಕೋಡ್ ಇರುವ ಕಾರಣಕ್ಕೆ ಹ್ಯಾಲೋಜನ್ ಮಾರ್ಕ್ ಅಳವಡಿಸಿಲ್ಲ. ಬಾರ್ಕೋಡ್ ಸ್ಕ್ಯಾನ್ ಮಾಡಿದರೆ, ವಿವರ ಬರುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಆಧಾರ್ ಕಾರ್ಡ್ ಮಾದರಿಯಲ್ಲಿ ವಿವರ ಬರಲಿದೆ. ಇನ್ನು ಲ್ಯಾಮಿನೇಷನ್ ಬದಲು ಪ್ಲಾಸ್ಟಿಕ್ ಕಾರ್ಡ್ ನೀಡಲಾಗುತ್ತಿದೆ.
ಕಾರ್ಡ್ನ ಮುಂಭಾಗದಲ್ಲಿ ಬಾರ್ಕೋಡ್,ಫೋಟೋ,ವ್ಯಕ್ತಿಯ ಹೆಸರು,ವಯಸ್ಸು ಇರಲಿದ್ದು, ಹಿಂಭಾಗದಲ್ಲಿ ವಿಳಾಸ ಇರಲಿದೆ. ಈ ಎಪಿಕ್ಕಾರ್ಡ್ನ್ನ ಮತದಾರರ ಗುರುತಿನ ಚೀಟಿಯಾಗಿ ಮಾತ್ರ ಬಳಸಬಹುದಾಗಿದ್ದು,ವಿಳಾಸ ದೃಢೀಕರಣ,ಜನ್ಮ ದಿನಾಂಕ ದೃಢೀಕರಣಕ್ಕೆ ಬಳಸಲು ಅವಕಾಶವಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಹೊಸದಾಗಿ ಮತದಾರರ ಪಟ್ಟಿಗೆ ಸೇರುವ ಮತದಾರರಿಗೆ ನೂತನ ಸ್ಮಾರ್ಟ್ ಕಾರ್ಡ್ ಮಾದರಿಯ ಎಪಿಕ್ ಕಾರ್ಡ್ ಒಂದು ಬಾರಿಗೆ ಉಚಿತವಾಗಿ ನೀಡಲಿದ್ದು, ಈಗಾಗಲೇ ಮತದಾರರಾಗಿರುವರು ಮತ್ತೆ ಎಪಿಕ್ಕಾರ್ಡ್ ಬೇಡಿಕೆ ಸಲ್ಲಿಸಿದರೆ, ಅವರಿಗೆ 30 ರೂ. ಶುಲ್ಕ ವಿಧಿಸಿ, ಪ್ಲಾಸ್ಟಿಕ್ ಕಾರ್ಡ್ ಮಾದರಿಯ ಸ್ಮಾರ್ಟ್ ಎಪಿಕ್ ಕಾರ್ಡ್ ವಿತರಿಸಲಾಗುತ್ತದೆ ಎಂದು ಮುಖ್ಯ ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.