ಬೆಂಗಳೂರು: ಅಕ್ರಮ ಕಟ್ಟಡ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಪಾಲಿಸದ ಮೈಸೂರು ಮಹಾನಗರ ಪಾಲಿಕೆ ಆಯುಕ್ತರ ವಿರುದ್ಧ ನ್ಯಾಯಾಂಗ ನಿಂದನೆ ಅಡಿ ಕ್ರಮ ಜರುಗಿಸುವುದಾಗಿ ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಸೆಪ್ಟೆಂಬರ್ 22ರಂದು ಹೈಕೋರ್ಟ್ ನೀಡಿರುವ ನಿರ್ದೇಶನದಂತೆ ಮುಂದಿನ ನಾಲ್ಕು ವಾರಗಳಲ್ಲಿ ಆಯುಕ್ತರು ವರದಿ ಸಲ್ಲಿಸಬೇಕಿತ್ತು. ಇಲ್ಲದಿದ್ದಲ್ಲಿ ನ್ಯಾಯಾಲಯ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಅಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಾಲಿಕೆ ಆಯುಕ್ತರಿಗೆ ಎಚ್ಚರಿಸಿದೆ.
ಎನ್ಆರ್ ಮೊಹಲ್ಲಾದಲ್ಲಿ ನೂಚಿಕಟ್ಟೆ ಎಂಬುವರು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುವಂತೆ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿರುವುದನ್ನು ಪ್ರಶ್ನಿಸಿ ಸ್ಥಳೀಯರಾದ ಉದಯ್ ಕುಮಾರ್ ಹಾಗೂ ಇತರೆ ನಾಲ್ಕು ಮಂದಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು.
ಇದನ್ನೂ ಓದಿ...₹150 ಬಿದಿದ್ದೆ ಎಂದು ಹೇಳಿ 3 ಲಕ್ಷ ರೂ. ಎಗರಿಸಿದ ಖದೀಮರು!: ಸಿಸಿಟಿವಿಯಲ್ಲಿ ಕೃತ್ಯ ಸೆರೆ
ಕೆಲ ಕಾಲ ವಾದ ಪ್ರತಿವಾದ ಆಲಿಸಿದ ಪೀಠ, ಆಯುಕ್ತರು ಕೋರ್ಟ್ ನಿರ್ದೇಶನದಂತೆ ವರದಿ ಸಲ್ಲಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೆ ಆಯುಕ್ತರು ನ್ಯಾಯಾಲಯದ ಆದೇಶದಂತೆ ಮುಂದಿನ ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸದಿದ್ದರೆ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿ, ವಿಚಾರಣೆಯನ್ನು ಜನವರಿ 12ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಮೈಸೂರಿನ ಎನ್.ಆರ್ ಮೊಹಲ್ಲಾದ ಪ್ರಮುಖ ವೃತ್ತದಲ್ಲಿ ನೂಚಿಕಟ್ಟೆ ಎಂಬುವರು ಅಕ್ರಮವಾಗಿ ವಾಣಿಜ್ಯ ಕಟ್ಟಡ ನಿರ್ಮಿಸುತ್ತಿದ್ದಾರೆ. ಇದರಿಂದ ಸ್ಥಳೀಯ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಸಲ್ಲಿಸಿರುವ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ವಿಭಾಗೀಯ ಪೀಠ, ಸೆಪ್ಟೆಂಬರ್ 22ರಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಕೆಲ ನಿರ್ದೇಶನ ನೀಡಿತ್ತು.
ನಿರ್ದೇಶನದಲ್ಲಿ ಪಾಲಿಕೆಯ ನಗರ ಯೋಜನಾ ಅಧಿಕಾರಿ ಕಟ್ಟಡ ನಿರ್ಮಾಣದ ಶೇ. 25ರಷ್ಟು ಪ್ರದೇಶದಲ್ಲಿ ಅಕ್ರಮವಾಗಿದೆ ಎಂದು ಮಾ. 19ರಂದು ಆಯುಕ್ತರಿಗೆ ವರದಿ ನೀಡಿದ್ದಾರೆ. ಹೀಗಾಗಿ ಪಾಲಿಕೆ ಆಯುಕ್ತರು ಅಕ್ರಮ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಸೂಕ್ತ ಅಧಿಕಾರಿ ನೇಮಿಸಬೇಕು. ಅವರಿಂದ ವರದಿ ತರಿಸಿಕೊಂಡು, ಒಂದು ವೇಳೆ ಅಕ್ರಮ ನಡೆದಿದ್ದರೆ ಕೂಡಲೇ ಕಾನೂನು ರೀತಿ ಕ್ರಮ ಜರುಗಿಸಬೇಕು. ಈ ಅನುಪಾಲನಾ ವರದಿಯನ್ನು ಮುಂದಿನ ವಿಚಾರಣೆ ವೇಳೆ ಕೋರ್ಟ್ಗೆ ಸಲ್ಲಿಸಬೇಕು ಎಂದು ಪಾಲಿಕೆ ಆಯುಕ್ತರಿಗೆ ನಿರ್ದೇಶಿಸಿತ್ತು.