ಬೆಂಗಳೂರು: ತಂದೆ-ಮಗನ ಮಧ್ಯೆ ಆಸ್ತಿ ವಿಚಾರಕ್ಕೆ ಸಂಬಂಧಿತ ಕೇಸ್ ವಿಚಾರಣೆ ನಡೆಸಿದ ಕೋರ್ಟ್ ವೃದ್ಧ ತಂದೆ - ತಾಯಿಗೆ ಆಸ್ತಿಯನ್ನು ಬಿಟ್ಟುಕೊಡುವಂತೆ ಮಗನಿಗೆ ತಾಕೀತು ಮಾಡಿದೆ.
ಇದೇ ಡಿಸೆಂಬರ್ 20ರೊಳಗೆ ತಂದೆ – ತಾಯಿಗೆ ಮನೆಯ ನೆಲ ಅಂತಸ್ತನ್ನು ಬಿಟ್ಟುಕೊಡಬೇಕು. ಅವರಿಗೆ ಯಾವುದೇ ದೈಹಿಕ, ಮಾನಸಿಕ ಹಿಂಸೆ ನೀಡಕೂಡದು. ಒಂದು ವೇಳೆ ಏನಾದರೂ ವಿಪರೀತವಾಗಿ ನಡೆದುಕೊಂಡಿದ್ದೇ ಆದರೆ, ಭಾರಿ ದಂಡ ವಿಧಿಸಲಾಗುವುದು ಎಂದು ಕಠಿಣ ಎಚ್ಚರಿಕೆ ನೀಡಿದೆ. ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಅರ್ಜಿದಾರರು, ತಂದೆತಾಯಿ ಜೊತೆ ನಡೆದುಕೊಳ್ಳುವ ಚಟುವಟಿಕೆಗಳನ್ನು ದಾಖಲಿಸಬೇಕು’ ಎಂದು ಕೂಡ ಪೀಠ ಆದೇಶಿಸಿದೆ.
ಬೆಂಗಳೂರು ಉತ್ತರ ವಿಭಾಗಾಧಿಕಾರಿ ನೀಡಿದ್ದ ಆದೇಶ ರದ್ದು ಕೋರಿ 42 ವರ್ಷದ ಟೆಕ್ಕಿಯೊಬ್ಬರು ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಇದನ್ನೂ ಓದಿ: ಸರ್ಕಾರಿ ಸೇವಾನಿರತ ವೈದ್ಯರ ಕೃಪಾಂಕ ಮಾನದಂಡ: ಅಧಿಸೂಚನೆ ರದ್ದುಪಡಿಸಿದ ಹೈಕೋರ್ಟ್
ವಿಚಾರಣೆ ವೇಳೆ ಪ್ರಕರಣದ ಸಂತ್ರಸ್ತರೂ ಆದ ನಿವೃತ್ತ ಪೊಲೀಸ್ ಅಧಿಕಾರಿ ಪರ ವಾದ ಮಂಡಿಸಿದ ವಕೀಲರು, ಅರ್ಜಿದಾರರು ನಿವೃತ್ತ ಡಿಎಸ್‌ಪಿ ಅವರ ಜೇಷ್ಠ ಪುತ್ರ. ತಂದೆಯ ಆಸ್ತಿಗಾಗಿ ಅವರ ಮೇಲೆ ದೈಹಿಕ ಹಲ್ಲೆ ನಡೆಸಿ ಅವರು ಪ್ರತ್ಯೇಕವಾಗಿ ವಾಸಿಸುವಂತೆ ಹಿಂಸೆ ನೀಡುತ್ತಿದ್ದಾರೆ’ ಎಂದು ಪ್ರಕರಣವನ್ನು ವಿವರಿಸಿದರು.
ಪ್ರಕರಣದ ಹಿನ್ನೆಲೆ
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಡಿಎಸ್‌ಪಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅರ್ಜಿದಾರರ ತಂದೆಗೆ 72 ವರ್ಷವಾದರೆ, ತಾಯಿಗೆ 62 ವರ್ಷ. ಪತಿ ಪತ್ನಿ ಇಬ್ಬರೂ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇವರು ಪೊಲೀಸ್ ಸೇವೆಯಲ್ಲಿದ್ದಾಗ ಬೆಂಗಳೂರಿನ ವಿಜಯನಗರದ ಚಂದ್ರಾ ಲೇ ಔಟ್‌ನಲ್ಲಿ 66x43 ರ ಅಳತೆಯ ನಿವೇಶನವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಕ್ರಯಪತ್ರ ಮಾಡಿಸಿಕೊಂಡಿದ್ದಾರೆ. ಸ್ವಯಾರ್ಜಿತ ಸ್ಥಿರಾಸ್ತಿಯಾಗಿದ್ದು, ಈ ನಿವೇಶನದಲ್ಲಿ ಮೂರು ಮಹಡಿಯ ಮನೆ ಇದೆ. ಇದನ್ನು ಬಿಟ್ಟುಕೊಂಡುವಂತೆ ಪುತ್ರ ಒತ್ತಾಯಿಸುತ್ತಿದ್ದಾರೆ ಎಂಬುದು ಸಂತ್ರಸ್ತ ತಂದೆಯ ಅಳಲು.
ಈ ಹಿನ್ನೆಲೆಯಲ್ಲಿ ಮಗನ ಕಾಟ ತಾಳಲಾರದೇ ತಂದೆ ಪೋಷಕರು – ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ–2007ರ ಕಲಂ 5 ಮತ್ತು 23ರ ಅನುಸಾರ ಬೆಂಗಳೂರು ಉತ್ತರ ವಿಭಾಗದ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿ ತಮಗೆ ರಕ್ಷಣೆ ನೀಡುವಂತೆ ಕೋರಿದ್ದರು.
ಪ್ರಕರಣವನ್ನು ವಿಚಾರಣೆ ನಡೆಸಿದ್ದ ಅರೆನ್ಯಾಯಿಕ ನ್ಯಾಯಮಂಡಳಿಯ ಕೆಎಎಸ್ ಅಧಿಕಾರಿ ಕೆ.ರಂಗನಾಥ್ 2021ರ ಮಾರ್ಚ್ 31ರಂದು ಆದೇಶ ನೀಡಿ, ವೃದ್ಧಾಪ್ಯದಲ್ಲಿರುವ ಪೋಷಕರಿಗೆ ಆಸ್ತಿ ಬಿಟ್ಟುಕೊಡುವಂತೆ ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಪುತ್ರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ. ಇದೀಗ ಹೈಕೋರ್ಟ್ ಕೂಡ ಅರೆನ್ಯಾಯಿಕ ನ್ಯಾಯಮಂಡಳಿಯ ತೀರ್ಪನ್ನು ಎತ್ತಿ ಹಿಡಿದಿದೆ.