ಬೆಂಗಳೂರು: ರಾಜ್ಯದ ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಸರ್ಕಾರದ ಆದೇಶ ಪ್ರಶ್ನಿಸಿ ಸಂಸ್ಕೃತ ಭಾರತಿ ಟ್ರಸ್ಟ್ ಹಾಗೂ ಕೆಲ ವಿದ್ಯಾರ್ಥಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್.ಆರ್ ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.
ವಿಚಾರಣೆ ವೇಳೆ, ಸರ್ಕಾರದ ಪರ ವಕೀಲರು ವಾದ ಮಂಡನೆಗೆ ಮತ್ತಷ್ಟು ಕಾಲಾವಕಾಶ ಕೋರಿದರು. ಹಾಗೇಯೇ ಪ್ರಕರಣವನ್ನು ಬೇಸಿಗೆ ರಜೆ ನಂತರ ವಿಚಾರಣೆಗೆ ನಿಗದಿಪಡಿಸುವಂತೆ ಕೋರಿದರು. ಇದಕ್ಕೆ ಆಕ್ಷೇಪಿಸಿದ ವಿದ್ಯಾರ್ಥಿಗಳ ಪರ ವಕೀಲರು, ರಾಜ್ಯ ಸರ್ಕಾರ ಪ್ರಕರಣವನ್ನು ಪ್ರತಿ ಬಾರಿ ಮುಂದೂಡಿಕೊಂಡೇ ಬರುತ್ತಿದೆ. ವಿದ್ಯಾರ್ಥಿಗಳ ಭವಿಷ್ಯ ಅಡಕತ್ತರಿಗೆ ಸಿಲುಕುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ತಮಗಿಷ್ಟ ಬಂದ ಭಾಷೆ ಅಧ್ಯಯನ ಮಾಡಲು ಸ್ವತಂತ್ರರು ಎಂಬುದನ್ನು ನ್ಯಾಯಾಲಯ ಪರಿಗಣಿಸಬೇಕು. ಸರ್ಕಾರ ಬೇಸಿಗೆ ರಜೆಯೇನು, ಒಂದು ವರ್ಷದ ನಂತರವೇ ವಾದ ಮಂಡಿಸಲಿ ಎಂದರು.
ವಾದ - ಪ್ರತಿವಾದ ಆಲಿಸಿದ ಪೀಠ, ಕೇಂದ್ರ ಸರ್ಕಾರ ಈಗಾಗಲೇ ತನ್ನ ನಿಲುವು ಸ್ಪಷ್ಟಪಡಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಯಾವುದೇ ಭಾಷೆಯ ಕಲಿಕೆ ಕಡ್ಡಾಯ ಅಲ್ಲವೆಂದು ಹೇಳಿದೆ. ಅದರಂತೆ, ರಾಜ್ಯದ ನಿಲುವು ಕೇಂದ್ರದ ನೀತಿಗೆ ವಿರುದ್ಧವಾಗಿದೆ. ಇನ್ನು ಕಡ್ಡಾಯ ಕಲಿಕೆ ವಿಚಾರವನ್ನು ಮರುಪರಿಶೀಲಿಸಿ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಸರ್ಕಾರಕ್ಕೆ ನ್ಯಾಯಾಲಯವೂ ಮೊದಲಿನಿಂದ ಹೇಳುತ್ತಲೇ ಬಂದಿದೆ. ಆದ್ದರಿಂದ, ಸರ್ಕಾರದ ಆದೇಶಕ್ಕೆ ತಡೆ ನೀಡುತ್ತಿದ್ದೇವೆ ಎಂದು ಪೀಠ ಸ್ಪಷ್ಟಪಡಿಸಿತು.
ರಾಜ್ಯದ ಕಾಲೇಜುಗಳಲ್ಲಿ ಕನ್ನಡ ಭಾಷೆಯನ್ನು ವ್ಯಾವಹಾರಿಕ ಮಟ್ಟದಲ್ಲಿ ಕಲಿಸಲು ರಾಜ್ಯ ಸರ್ಕಾರ 2021ರ ಆಗಸ್ಟ್ 7 ಮತ್ತು ಸೆಪ್ಟೆಂಬರ್ 15ರಂದು ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ರಾಜ್ಯ ಸರ್ಕಾರ ಕನ್ನಡವನ್ನು ಸಮಾಜದೊಂದಿಗೆ ವ್ಯವಹರಿಸುವಷ್ಟಾದರೂ ಕಲಿಸುವ ಸದುದ್ದೇಶದಿಂದ ಇಂತಹ ಕನ್ನಡ ಕಲಿಕೆಯನ್ನು ಕಾಲೇಜು ಹಂತದಲ್ಲಿ ತಂದಿದ್ದೇವೆ ಎಂದು ಸಮರ್ಥಿಸಿಕೊಂಡಿತ್ತು.
ಇದನ್ನು ಅಲ್ಲಗೆಳೆದಿದ್ದ ಹೈಕೋರ್ಟ್, ಹೊರ ರಾಜ್ಯಗಳ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗಲಿದೆ. ಆದೇಶ ಮರುಪರಿಶೀಲಿಸಿ ಎಂದು ಸೂಚಿಸಿತ್ತು. ನಂತರ ಹೈಕೋರ್ಟ್ ಸೂಚನೆಯಂತೆ ಸ್ಪಷ್ಟನೆ ನೀಡಿದ್ದ ಕೇಂದ್ರ ಸರ್ಕಾರ, ಎನ್ಇಪಿಯಲ್ಲಿ ಯಾವುದೇ ಭಾಷೆಯ ಕಲಿಕೆ ಕಡ್ಡಾಯವಲ್ಲ ಎಂದಿತ್ತು.