ಬೆಂಗಳೂರು: ಭೂಮಿ ಅಗೆಯುವಾಗ ಚಿನ್ನ ಸಿಕ್ಕಿದ್ದು, ಅದನ್ನು ಕಡಿಮೆ ಬೆಲೆಗೆ ಮಾರುತ್ತೇನೆ ಎಂದು ನಂಬಿಸಿ ಪರಿಚಯಸ್ಥನಿಂದ 2.75 ಲಕ್ಷ ರೂ. ದೋಚಿದ್ದ ಆರೋಪಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ನಿರಾಕರಿಸಿದೆ.
ಬಳ್ಳಾರಿಯ ಹರಪನಹಳ್ಳಿ ತಾಲೂಕಿನ ತಿಮ್ಮಪ್ಪ ಜಗಳೂರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿರುವ ನ್ಯಾ. ಎಂ.ಜಿ.ಉಮಾ ಅವರಿದ್ದ ಪೀಠ, ಅರ್ಜಿದಾರರ ವಿರುದ್ಧ ದರೋಡೆ, ಕೊಲೆ ಯತ್ನ ರೀತಿಯ ಗಂಭೀರ ಆರೋಪಗಳಿವೆ. ಹೀಗಾಗಿ ಪೊಲೀಸರು ಆರೋಪಿತ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದ್ದು, ನಿರೀಕ್ಷಣಾ ಜಾಮೀನು ನೀಡುವುದು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ
2020ರ ಡಿ. 4ರಂದು ಹಲವಾಗಿಲು ಪೊಲೀಸ್ ಠಾಣೆಗೆ ದೂರು ನೀಡಿದ್ದ ವ್ಯಕ್ತಿಯೊಬ್ಬರು, ಮಂಜಪ್ಪ ಎಂಬುವನು ತಮ್ಮನ್ನು ಸಂಪರ್ಕಿಸಿ ಭೂಮಿ ಅಗೆಯುವಾಗ ಬಂಗಾರ ಸಿಕ್ಕಿದೆ. ಮಗಳ ಮದುವೆಗೆ ಹಣ ಹೊಂದಿಸಲು ಅದನ್ನು ಮಾರಾಟ ಮಾಡುತ್ತಿದ್ದೇವೆ ಎಂದು ತಿಳಿಸಿ ಚಿನ್ನದ ತುಂಡೊಂದನ್ನು ನೀಡಿದ್ದ. ಅದನ್ನು ಪರಿಶೀಲಿಸಿದಾಗ ಅಸಲಿ ಚಿನ್ನವೆಂದು ತಿಳಿದು ಬಂದಿತ್ತು.
ಸಿಕ್ಕಿರುವ ನಿಧಿಯಲ್ಲಿ ಒಟ್ಟು 250 ಗ್ರಾಂ ಚಿನ್ನವಿದ್ದು, 12 ಲಕ್ಷ ರೂಪಾಯಿ ಕೊಟ್ಟರೆ ಅದನ್ನು ಮಾರುವುದಾಗಿ ಹೇಳಿದ್ದ. ಅಂತಿಮವಾಗಿ 2.75 ಲಕ್ಷ ರೂ.ಗೆ ಚಿನ್ನ ಮಾರಾಟ ಮಾಡಲು ಒಪ್ಪಿದ್ದ. ಡಿ. 3ರಂದು ನಿರ್ಜನ ಪ್ರದೇಶಕ್ಕೆ ಹಣದೊಂದಿಗೆ ಬರುವಂತೆ ಸೂಚಿಸಿದ್ದ. ಅದರಂತೆ ಹಣದೊಂದಿಗೆ ನಿಗದಿತ ಜಾಗ ತಲುಪುತ್ತಿದ್ದಂತೆ ಆರು ಮಂದಿ ಸೇರಿ ಚಾಕುವಿನಿಂದ ಹಲ್ಲೆ ನಡೆಸಿ, 2.75 ಲಕ್ಷ ರೂ. ಹಾಗೂ ಮೊಬೈಲ್ ಫೋನ್ ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ಆರೋಪಿಸಿದ್ದರು.
ದೂರಿನ ಮೇರೆಗೆ ಮಂಜಪ್ಪ ಹಾಗೂ ಇತರರನ್ನು ಬಂಧಿಸಿದ್ದ ಪೊಲೀಸರು, ಆರೋಪಿಗಳಿಂದ 2 ಲಕ್ಷ ರೂಪಾಯಿ ಹಣ, ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ವಶಪಡಿಸಿಕೊಂಡಿದ್ದರು. ತನಿಖೆ ಮುಂದುವರೆಸಿ ಅರ್ಜಿದಾರನನ್ನು 5ನೇ ಆರೋಪಿಯನ್ನಾಗಿ ಸೇರಿಸಿದ್ದರು. ಬಂಧನದ ಭೀತಿ ಎದುರಿಸುತ್ತಿದ್ದ ತಿಮ್ಮಪ್ಪ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿ, ಪ್ರಕರಣಕ್ಕೂ ತನಗೂ ಸಂಬಂಧವಿಲ್ಲ. ಯಾವುದೇ ಸಾಕ್ಷ್ಯಾಧಾರ ಇಲ್ಲದಿದ್ದರೂ ಅನಗತ್ಯವಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಆದ್ದರಿಂದ ಜಾಮೀನು ನೀಡಬೇಕೆಂದು ಕೋರಿದ್ದ.
ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರಿ ವಕೀಲರು, ತಿಮ್ಮಪ್ಪನ ವಿರುದ್ಧ ಗಂಭೀರ ಆರೋಪಗಳಿವೆ. ಹಲ್ಲೆಗೊಳಗಾಗಿರುವ ದೂರುದಾರ ಪ್ರಕರಣದ ಎಲ್ಲಾ ಆರೋಪಿಗಳನ್ನು ಗುರುತಿಸಬೇಕಿದೆ. ಅದಕ್ಕಾಗಿ ಆರೋಪಿಯನ್ನು ವಶಕ್ಕೆ ಪಡೆಯಬೇಕಿದೆ. ಆದ್ದರಿಂದ ಜಾಮೀನು ಮಂಜೂರು ಮಾಡಬಾರದು ಎಂದು ಮನವಿ ಮಾಡಿದ್ದರು. ಈ ಅಂಶವನ್ನು ಪರಿಗಣಿಸಿರುವ ಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿದೆ.