ಬೆಂಗಳೂರು : ಲಾಕ್‌ಡೌನ್ ಅವಧಿಯಲ್ಲಿ ಸಿಗರೇಟ್ ವ್ಯಾಪಾರಿಗಳಿಂದ ಹಣ ಸುಲಿಗೆ ಮಾಡಿದ ಆರೋಪ ಸಂಬಂಧ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಸಹಾಯಕ ಪೊಲೀಸ್ ಆಯುಕ್ತರಾಗಿದ್ದ ಪ್ರಭು ಶಂಕರ್ ವಿರುದ್ಧ ದಾಖಲಿಸಿದ್ದ 6 ಪ್ರತ್ಯೇಕ ಎಫ್‌ಐಆರ್‌ಗಳನ್ನು ಹೈಕೋರ್ಟ್ ರದ್ದುಪಡಿಸಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮತ್ತು ಕಾಟನ್‌ಪೇಟೆ ಠಾಣೆ ಪೊಲೀಸರು ದಾಖಲಿಸಿರುವ ತಲಾ 3 ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೋರಿ ಪ್ರಭು ಶಂಕರ್ ಸಲ್ಲಿಸಿದ್ದ ತಕರಾರು ಅರ್ಜಿಗಳನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಹೆಚ್ ಪಿ ಸಂದೇಶ್ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ಮಾಡಿದೆ.
ಇದನ್ನೂ ಓದಿ: ಸಿಸಿಬಿ ಅಧಿಕಾರಿ ವಿರುದ್ಧ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ: ತನಿಖೆಗೆ ಜಂಟಿ ಪೊಲೀಸ್ ಆಯುಕ್ತರ ಆದೇಶ
ಪ್ರಕರಣದಲ್ಲಿ ಅರ್ಜಿದಾರರು ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು ಮತ್ತು ಹಣ ಸ್ವೀಕರಿಸಿದವರು ಎಂಬ ಬಗ್ಗೆ ಸಮಸ್ಯೆಗೊಳಗಾದವರು ಎಸಿಬಿಗೆ ದೂರು ಸಲ್ಲಿಸಿಲ್ಲ. ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗಳಲ್ಲಿ ಅರ್ಜಿದಾರರ ವಿರುದ್ಧ ಮಾಡಲಾದ ಆರೋಪಗಳನ್ನು ಸಾಬೀತುಪಡಿಸುವ ಸಾಕ್ಷ್ಯಧಾರಗಳಲ್ಲಿ ಸಾಕಷ್ಟು ಕೊರತೆಯಿದೆ.
ಇಂತಹ ಸಂದರ್ಭದಲ್ಲಿ ಪ್ರಕರಣವನ್ನು ಮುಂದುವರಿಸಲು ಅವಕಾಶ ನೀಡುವುದು ಸರಿಯಲ್ಲ ಎಂದು ತೀರ್ಮಾನಿಸಿ, ಪ್ರಭುಶಂಕರ್ ವಿರುದ್ಧ ಎಸಿಬಿ ಮತ್ತು ಕಾಟನ್‌ಪೇಟೆ ಠಾಣಾ ಪೊಲೀಸರು ದಾಖಲಿಸಿದ್ದ 6 ಎಫ್‌ಐಆರ್‌ಗಳನ್ನು ರದ್ದುಪಡಿಸಿ ಆದೇಶಿಸಿದೆ.
ಲಾಕ್‌ಡೌನ್ ಅವಧಿಯಲ್ಲಿ ಅಕ್ರಮವಾಗಿ ಸಿಗರೇಟ್ ಮಾರಾಟಕ್ಕೆ ನೆರವು ನೀಡುವುದಾಗಿ ತಿಳಿಸಿ ವ್ಯಾಪಾರಿಗಳಿಂದ 62.5 ಲಕ್ಷ ರೂ. ಲಂಚ ಸ್ವೀಕರಿಸಿದ ಆರೋಪದ ಮೇಲೆ ಸಿಸಿಬಿ ಎಸಿಪಿಯಾಗಿದ್ದ ಪ್ರಭು ಶಂಕರ್ ವಿರುದ್ಧ ಕಾಟನ್‌ಪೇಟೆ ಠಾಣಾ ಪೊಲೀಸರು 2020ರ ಮೇ 7ರಂದು ಮೂರು ಪ್ರತ್ಯೇಕ ಎಫ್‌ಐಆರ್ ದಾಖಲಿಸಿದ್ದರು.
ಅದನ್ನು ಆಧರಿಸಿ ಎಸಿಬಿ ಡಿವೈಎಸ್‌ಪಿ ರಾಜೇಂದ್ರ ಅವರು ಸಲ್ಲಿಸಿದ ಮನವಿ ಮೇರೆಗೆ ಭ್ರಷ್ಟಾಚಾರ ಆರೋಪ ಸಂಬಂಧ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಲು ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವೂ ಅನುಮತಿ ನೀಡಿತ್ತು. ಇದರಿಂದ ಎಸಿಬಿಯು ಪ್ರತ್ಯೇಕ ಮೂರು ಎಫ್‌ಐಆರ್ ದಾಖಲಿಸಿತ್ತು. ಈ 6 ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೋರಿ ಪ್ರಭುಶಂಕರ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ : ಪ್ರಕರಣ ಮುಚ್ಚಿ ಹಾಕಲು ಲಂಚಕ್ಕೆ ಬೇಡಿಕೆಯಿಟ್ಟ ಆರೋಪ : ಸಿಸಿಬಿ ಎಸಿಪಿ ಅಮಾನತು