ಬೆಂಗಳೂರು: ವಿದ್ಯುತ್ ಸ್ಪರ್ಶದಿಂದ ಸಂಭವಿಸಿದ ಸಾವು - ನೋವಿನ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಕೆಪಿಟಿಸಿಎಲ್ ಮತ್ತು ಬೆಸ್ಕಾಂ ಒಟ್ಟು 1 ಕೋಟಿ 28 ಲಕ್ಷ ರೂ. ಪರಿಹಾರ ವಿತರಣೆ ಮಾಡಬೇಕೆಂದು ಹೈಕೋರ್ಟ್ ಆದೇಶ ನೀಡಿದೆ.
ಕರೆಂಟ್ ತಗುಲಿ ಅಸುನೀಗಿದ ಒಬ್ಬ ವ್ಯಕ್ತಿಯ ಪತ್ನಿ ಹಾಗೂ ಗಾಯಾಳುಗಳಾಗಿರುವ ಇಬ್ಬರು ಅಪ್ರಾಪ್ತ ಸಂತ್ರಸ್ತರ ನೆರವಿಗೆ ಹೈಕೋರ್ಟ್ ಧಾವಿಸಿದೆ. 2017-18ರ ಅವಧಿಯಲ್ಲಿ ನಡೆದಿರುವ ಮೂರು ಪ್ರತ್ಯೇಕ ವಿದ್ಯುತ್ ಅಪಘಾತ ಪ್ರಕರಣಗಳಲ್ಲಿ ₹1.28 ಕೋಟಿ ಪರಿಹಾರ ಪಾವತಿಸಲು ಕೆಪಿಟಿಸಿಎಲ್ ಮತ್ತು ಬೆಸ್ಕಾಂಗೆ ನಿರ್ದೇಶನ ನೀಡಿದೆ.
- ಹಾಸನ ಜಿಲ್ಲೆಯ ಸಕಲೇಶಪುರದ ಕಾಫಿ ಎಸ್ಟೇಟ್‌ನಲ್ಲಿ ಕಾಳು ಮೆಣಸಿಗೆ ಸಂಬಂಧಿಸಿದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದ ಕೂಲಿ ಕಾರ್ಮಿಕ ಸುಬ್ರಹ್ಮಣ್ಯ ಅವರ ಪತ್ನಿ ರೇಖಾ (36) ಅವರಿಗೆ 25.52 ಲಕ್ಷ ರೂ. ಪರಿಹಾರ ನೀಡುವಂತೆ ಕೆಪಿಟಿಎಸ್‌ಎಲ್‌ಗೆ ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠ ಆದೇಶ ನೀಡಿದೆ.
- ಮತ್ತೊಂದು ಪ್ರಕರಣದಲ್ಲಿ ವಿದ್ಯುತ್ ಸ್ಪರ್ಷದಿಂದ ಶೇ.79 ರಷ್ಟು ಅಂಗವೈಕಲ್ಯದಿಂದ ಬಳಲುತ್ತಿರುವ ಬೆಂಗಳೂರಿನ ಲೊಟ್ಟೆಗೊಲ್ಲಹಳ್ಳಿಯ 15 ವರ್ಷದ ಬಾಲಕಿ ಚಂದನಾ ಅವರಿಗೆ ಕೆಪಿಟಿಸಿಎಲ್ ಕೇವಲ 2.5ಲಕ್ಷ ರೂ ಪರಿಹಾರ ನೀಡಿತ್ತು. ಇದನ್ನು ಪ್ರಶ್ನಿಸಿ ಬಾಲಕಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ 51.76 ಲಕ್ಷ ರೂ. ಪರಿಹಾರ ನೀಡಲು ಬೆಸ್ಕಾಂಗೆ ಆದೇಶಿಸಿದೆ.
- ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ ಶೇ. 80ರಷ್ಟು ಸುಟ್ಟಗಾಯಕ್ಕೆ ಒಳಗಾಗಿರುವ ಮುಯಿಜ್ ಎಂಬುವವರಿಗೆ ₹5 ಲಕ್ಷ ರೂಪಾಯಿ ಪರಿಹಾರವನ್ನು ಕೆಪಿಟಿಸಿಎಲ್ ನೀಡಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಮುಯಿಜ್ ಅಹ್ಮದ್ ಶರೀಫ್‌ಗೆ ₹50.82 ಲಕ್ಷ ಪರಿಹಾರ ಪಾವತಿಸಲು ಹೈಕೋರ್ಟ್ ಆದೇಶ ಮಾಡಿದೆ.
ರಾಜ್ಯ ಸರ್ಕಾರದ ನಿಯಮಾವಳಿಗಳ ಪ್ರಕಾರ ಪರಿಹಾರ ನೀಡದಿರುವ ಸರ್ಕಾರಿ ವಿದ್ಯುತ್ ಕಂಪನಿಗಳ ಕ್ರಮವು ಮನಸೋ ಇಚ್ಛೆಯಿಂದ ಕೂಡಿದೆ. ಸೂಕ್ತ ಪರಿಹಾರ ವಿತರಿಸದಿರುವುದು ಪರಿಹಾರ ವಿತರಿಸುವ ಮೂಲ ಉದ್ದೇಶವನ್ನೇ ವಿಫಲಗೊಳಿಸುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ವಿದ್ಯುತ್ ಕಂಪನಿಗಳ ವಾದದಂತೆ ಮಗುವು ಹೈ-ಟೆನ್ಶನ್ ಎಲೆಕ್ಟ್ರಿಕಲ್ ಲೈನ್ ಹತ್ತಿರ ಹೋಗದಂತೆ ಮತ್ತು ಇಂಡಕ್ಷನ್ ವಲಯದೊಳಗೆ ಬರದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಲಾಗದು. ಮಕ್ಕಳು ಬಫರ್ ಜೋನ್ ವಲಯದಿಂದ ದೂರ ಇರಬೇಕು ಎಂದು ನಿರೀಕ್ಷಿಸಲಾಗದು ಎಂದು ಹೈಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಓವರ್‌ಹೆಡ್ ಕರೆಂಟ್ ಲೈನ್‌ಗಳಿಂದ ವಿದ್ಯುತ್ ಅಪಘಾತ ಸಂಭವಿಸಿದರೆ ಮುಖ್ಯ ಎಲೆಕ್ಟ್ರಿಕಲ್ ನಿರೀಕ್ಷಣಾ ಕಚೇರಿಯ ವರದಿಗಾಗಿ ಕಾಯದೇ ಎರಡು ತಿಂಗಳಲ್ಲಿ ವಿದ್ಯುತ್ ಪೂರೈಕೆ ಕಂಪನಿಗಳು ಸಂತ್ರಸ್ತರಿಗೆ ಪರಿಹಾರ ಪಾವತಿಸಬೇಕು ಎಂದು ಹೈಕೋರ್ಟ್ ಆದೇಶ ಮಾಡಿದೆ.
ಇದನ್ನೂ ಓದಿ: ಕಾರಾಗೃಹದಲ್ಲಿ ಶ್ರೀಲಂಕಾ ಪ್ರಜೆಗಳ ಅಕ್ರಮ ಬಂಧನ: ಕೇಂದ್ರ, ರಾಜ್ಯಕ್ಕೆ ಹೈಕೋರ್ಟ್ ನೋಟಿಸ್..