ಬೆಂಗಳೂರು : ಸಂಡೇ ಬಜಾರ್ ಬಳಿಯ ಕಾರ್ಮಿಕರ ಗುಡಿಸಲುಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಬಳಿಕ ಬೆಳಕಿಗೆ ಬಂದ ನಗರದ ಕಾಚರಕನಹಳ್ಳಿಯ ಕೆರೆ ಜಾಗ ಒತ್ತುವರಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಕೆರೆ ಮತ್ತು ಅದರ ಬಫರ್ ಜೋನ್ನಲ್ಲಿ ಸರ್ಕಾರಿ ಸಂಸ್ಥೆಗಳು ಸೇರಿದಂತೆ ಖಾಸಗಿಯವರು ಮಾಡಿರುವ ಎಲ್ಲ ಒತ್ತುವರಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಆಗಸ್ಟ್ 17ರೊಳಗೆ ವರದಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಕಾಚರಕನಹಳ್ಳಿ (ಸಂಡೇ ಬಜಾರ್) ಸ್ಲಮ್ನಲ್ಲಿದ್ದ ವಲಸೆ ಕಾರ್ಮಿಕರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಹಿಂದಿನ ವಿಚಾರಣೆ ವೇಳೆ ಸರ್ಕಾರಿ ವಕೀಲರು ಕೆರೆ ಪ್ರದೇಶದ ಸರ್ವೇ ವರದಿ ಸಲ್ಲಿಸಿದ್ದರು. ವರದಿ ಪರಿಶೀಲಿಸಿದ್ದ ಪೀಠ ಕೆರೆ ಪ್ರದೇಶದ 13.30 ಎಕರೆ ಜಾಗವನ್ನು ಖಾಸಗಿಯವರು, 23.6 ಎಕರೆಯನ್ನು ಸರ್ಕಾರದ ಪ್ರಾಧಿಕಾರಗಳೇ ಒತ್ತುವರಿ ಮಾಡಿವೆ. ಈ ನಿಟ್ಟಿನಲ್ಲಿ ಒತ್ತುವರಿಗಳನ್ನು ಹೇಗೆ ತೆರವುಗೊಳಿಸುತ್ತೀರಿ ಎಂಬ ಬಗ್ಗೆ 3 ವಾರಗಳಲ್ಲಿ ನಿರ್ಧಾರ ಕೈಗೊಳ್ಳಿ ಎಂದು ಸರ್ಕಾರಕ್ಕೆ ನಿರ್ದೇಶಿಸಿತ್ತು.
ಇಂದು ನಡೆದ ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮನವಿ ಮಾಡಿ, ಒತ್ತುವರಿ ತೆರವುಗೊಳಿಸುವ ಸಂಬಂಧ ಕಂದಾಯ ಇಲಾಖೆ ಕಾರ್ಯದರ್ಶಿ ವಿವಿಧ ಇಲಾಖೆಗಳೊಂದಿಗೆ ಸಭೆ ನಡೆಸಿದ್ದಾರೆ. ಆದ್ದರಿಂದ, ಒತ್ತುವರಿ ತೆರವು ಸಂಬಂಧ ಕೈಗೊಳ್ಳುವ ಕ್ರಮಗಳ ಕುರಿತು ವರದಿ ಸಲ್ಲಿಸಲು ಮತ್ತೆ ವಾರ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಇದಕ್ಕೆ ಬೇಸರ ವ್ಯಕ್ತಪಡಿಸಿದ ಪೀಠ, ಕೆರೆ ಮತ್ತು ಬಫರ್ ವಲಯದಲ್ಲಿ ಒತ್ತುವರಿ ಕುರಿತು ಸರ್ಕಾರವೇ ತಿಳಿಸಿದೆ. ಆದರೆ, ತೆರವು ಮಾಡಲು ಹಿಂದೇಟು ಹಾಕುತ್ತಿರುವುದೇಕೆ? ಎಂದು ಪ್ರಶ್ನಿಸಿತು.
ಇದನ್ನೂ ಓದಿ: ಸಿಎಂ ವಿದಾಯಕ್ಕೆ ವೇದಿಕೆ ಸಜ್ಜು : ಜು.26 ರಂದು ಬಿಎಸ್ವೈ ರಾಜೀನಾಮೆ ನಿರ್ಧಾರ?
ಸರ್ಕಾರಿ ವಕೀಲರು ಉತ್ತರಿಸಿ, ಸಂಬಂಧಿತ ಪ್ರಾಧಿಕಾರಗಳೊಂದಿಗೆ ಚರ್ಚೆ ನಡೆಸಿ ಒತ್ತುವರಿ ತೆರವಿಗೆ ಪ್ರಯತ್ನ ಮಾಡಲಾಗುತ್ತಿದೆ. ಈ ಸಂಬಂಧ ನ್ಯಾಯಾಲಯಕ್ಕೆ ಸಮಗ್ರ ವರದಿ ಸಲ್ಲಿಸಲು ಕಾಲಾವಕಾಶ ಬೇಕಾಗಿದೆ ಎಂದರು.
ಇದನ್ನೂ ಓದಿ: ಸಿಎಂ ವಿದಾಯಕ್ಕೆ ವೇದಿಕೆ ಸಜ್ಜು : ಜು.26 ರಂದು ಬಿಎಸ್ವೈ ರಾಜೀನಾಮೆ ನಿರ್ಧಾರ?
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಕೆರೆ ಒತ್ತುವರಿ ತೆರವುಗೊಳಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ಕೋರ್ಟ್ ನಿರ್ದೇಶನ ಪಾಲಿಸುವ ಕುರಿತು ಕಂದಾಯ ಇಲಾಖೆಯು ಆಗಸ್ಟ್ 17ರೊಳಗೆ ಪ್ರಮಾಣಪತ್ರ ಸಲ್ಲಿಸಬೇಕು. ಒಂದು ವೇಳೆ ಒತ್ತುವರಿ ತೆರವಿಗೆ ಮುಂದಾಗದಿದ್ದರೆ ನ್ಯಾಯಾಲಯವೇ ಸೂಕ್ತ ಆದೇಶ ಹೊರಡಿಸಲಿದೆ ಎಂದು ಎಚ್ಚರಿಕೆ ನೀಡಿ, ವಿಚಾರಣೆಯನ್ನು ಆಗಸ್ಟ್ 18ಕ್ಕೆ ಮುಂದೂಡಿತು.