ಬೆಂಗಳೂರು: ತುಮಕೂರು ನಗರದ ರಸ್ತೆಗಳಲ್ಲಿನ ಅಪಾಯಕಾರಿ ಗುಂಡಿಗಳನ್ನು ಮುಚ್ಚಲು ಹಾಗೂ ದುರಸ್ತಿ ಮಾಡಲು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ತುಮಕೂರು ನಗರಸಭೆಗೆ, ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ತುಮಕೂರಿನ ವಕೀಲ ಎಲ್. ರಮೇಶ್ ನಾಯಕ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ತುಮಕೂರು ನಗರದ ರಸ್ತೆಗಳೆಲ್ಲವೂ ಗುಂಡಿಮಯವಾಗಿವೆ. ಕೆಲವು ಕಡೆಯಂತೂ ರಸ್ತೆ ಗುಂಡಿಗಳು ಅಪಾಯಕಾರಿಯಾಗಿ ಪರಿಣಮಿಸಿದ್ದು, ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿವೆ. ಆದ್ದರಿಂದ ರಸ್ತೆ ಗುಂಡಿಗಳನ್ನು ತರ್ತಾಗಿ ಮುಚ್ಚಲು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಬೇಕು ಎಂದು ಕೋರಿದರು.
ಇದನ್ನೂ ಓದಿ: ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್: ವಜ್ರ ಬಸ್ ಪ್ರಯಾಣ ದರದಲ್ಲಿ ಭಾರಿ ಇಳಿಕೆ
ವಾದ ಪರಿಗಣಿಸಿದ ಪೀಠ, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ನಗರಸಭೆ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ, 2 ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ, ವಿಚಾರಣೆ ಮುಂದೂಡಿತು.
ಅರ್ಜಿದಾರರ ಕೋರಿಕೆ
ನಗರದ ಮುಖ್ಯರಸ್ತೆಗಳು ಹಾಗೂ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲೆವೂ ಗುಂಡಿಗಳಿಂದ ತುಂಬಿವೆ. ರಸ್ತೆಗುಂಡಿಗಳ ದುಃಸ್ಥಿತಿ ಕುರಿತು ಮಾಧ್ಯಮಗಳು ವರದಿ ಪ್ರಕಟಿಸಿವೆ.
ಕಳೆದ ಮೂರು ವರ್ಷಗಳಿಂದ ರಸ್ತೆ ಗುಂಡಿಗಳನ್ನು ಮುಚ್ಚಲು ಕೋರಿ ಹಲವು ಬಾರಿ ಮನವಿ ಸಲ್ಲಿಸಿದ್ದರೂ ತುಮಕೂರು ನಗರಸಭೆ ಅಧಿಕಾರಿಗಳು ಪರಿಗಣಿಸಿಲ್ಲ. 2021ರ ಸೆಪ್ಟೆಂಬರ್ 8ರಂದು ಹಾಗೂ ಅಕ್ಟೋಬರ್ 6ರಂದು ಲಿಖಿತವಾಗಿ ಮನವಿ ನೀಡಿದ್ದರೂ ಪರಿಗಣಿಸಿಲ್ಲ.
ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ಕಾಯ್ದೆ-1976ರ ಸೆಕ್ಷನ್ 266 ಹಾಗೂ ಸೆಕ್ಷನ್ 58(19) ರ ಪ್ರಕಾರ ರಸ್ತೆಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವುದು ನಗರಸಭೆಗಳ ಕರ್ತವ್ಯ. ಅದೇ ರೀತಿ ಉತ್ತಮ ರಸ್ತೆಗಳನ್ನು ನೀಡದ ನಗರಸಭೆಯು ಸಂವಿಧಾನದ ವಿಧಿ 21ರ ಲಭ್ಯವಿರುವ ಜೀವಿಸುವ ಹಕ್ಕನ್ನೂ ಉಲ್ಲಂಘಿಸುತ್ತಿದೆ.
ಆದ್ದರಿಂದ ರಸ್ತೆ ಗುಂಡಿಗಳನ್ನು ತಕ್ಷಣವೇ ಮುಚ್ಚಲು ಹಾಗೂ ದುರಸ್ತಿ ಮಾಡಲು ಸರ್ಕಾರ ಹಾಗೂ ತುಮಕೂರು ನಗರಸಭೆಗೆ ಆದೇಶಿಸಬೇಕು ಎಂದು ಕೋರಿದ್ದಾರೆ.