ಬೆಂಗಳೂರು: ನಗರದ ದೊಡ್ಡ ಬಿದರಕಲ್ಲು ಸಮೀಪದ ತಿಪ್ಪೇನಹಳ್ಳಿಯಲ್ಲಿ ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ನೀಡಿರುವ ಅನುಮತಿ ಮುಂದುವರಿಸದಂತೆ ನಿರ್ದೇಶಿಸಲು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಡೆಲ್ಲಿ ವರ್ಲ್ಡ್ ಪಬ್ಲಿಕ್ ಸ್ಕೂಲ್ ಹಾಗೂ ಸ್ಥಳೀಯ ನಿವಾಸಿ ವಿಜಯನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿ ವಿಚಾರಣೆ ನಡೆಸಿದ ಪೀಠ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಾದಿಸಿದ ವಕೀಲರು, 2016ರ ಘನತ್ಯಾಜ್ಯ ವಿಲೇವಾರಿ ನಿಯಮಗಳಿಗೆ ವಿರುದ್ಧವಾಗಿ ತಿಪ್ಪೇನಹಳ್ಳಿಯಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ. ಘಟಕದಿಂದ ಹೊರ ಬರುತ್ತಿರುವ ಹೊಗೆಯಿಂದ ಸುತ್ತಮುತ್ತಲ ವಸತಿ ಪ್ರದೇಶದ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ 2018ರಿಂದಲೂ ಮೂರು ಬಾರಿ ಶೋಕಾಸ್ ನೋಟಿಸ್ ನೀಡಿದೆ. ಹಾಗಿದ್ದೂ ಘಟಕಕ್ಕೆ ನೀಡಿರುವ ಅನುಮತಿಯನ್ನು ಪ್ರತಿ ವರ್ಷ ಮುಂದುವರಿಸಿಕೊಂಡು ಬರಲಾಗುತ್ತಿದೆ. ಆದ್ದರಿಂದ, ಇದೇ ಜೂನ್ 30ಕ್ಕೆ ಘಟಕದ ಕಾರ್ಯಾಚರಣೆಗೆ ನೀಡಿರುವ ಅನುಮತಿ ಮುಕ್ತಾಯಗೊಳ್ಳಲಿದ್ದು, ಮತ್ತೆ ಅದನ್ನು ಮುಂದುವರಿಸದಂತೆ ಮಂಡಳಿ ಹಾಗೂ ಪಾಲಿಕೆಗೆ ನಿರ್ದೇಶಿಸಬೇಕು ಎಂದರು.
ಅರ್ಜಿದಾರರು, 2014ರಿಂದ ಘಟಕ ಕಾರ್ಯ ನಿರ್ವಹಿಸುತ್ತಿದ್ದು, ನಿತ್ಯ ಸುಮಾರು 200 ಟನ್ ತ್ಯಾಜ್ಯ ಸಂಸ್ಕರಣೆ ಮಾಡಲಾಗುತ್ತಿದ್ದು, ಘನತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಹಾಗಾಗಿ ಘಟಕವನ್ನು ಮುಂದುವರಿಸದಂತೆ ಆದೇಶಿಸಬೇಕು ಎಂದು ಕೋರಿದ್ದಾರೆ.