ಬೆಂಗಳೂರು: ಮಕ್ಕಳ ರಕ್ಷಣೆಗೆ ನಿಯೋಜನೆಗೊಂಡಿರುವ ನ್ಯಾಯ ಸಮಿತಿಗಳಿಗೆ ಅಗತ್ಯ ನೆರವು ನೀಡಲು ಸಣ್ಣ ಮಟ್ಟದ ಶಾಶ್ವತ ಸಚಿವಾಲಯ ರಚನೆ ಮಾಡಬೇಕೆಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಈ ಕುರಿತು ಸುಪ್ರೀಂಕೋರ್ಟ್ ನಿರ್ದೇಶನದಂತೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕಾ ಹಾಗೂ ನ್ಯಾ. ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ವಿಚಾರಣೆಗೆ ಬಂತು.
ಬಾಲ ಕಾಯ್ದೆ-2015ರ ಅನುಷ್ಠಾನಕ್ಕೆ ಆಯಾ ರಾಜ್ಯಗಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಗಮನ ಹರಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿತ್ತು. ಆದ್ರೆ ಕಾಯ್ದೆ ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರ ವಿಫಲಗೊಂಡಿದೆ ಎಂದು ನ್ಯಾಯಪೀಠ ಆಕ್ರೋಶ ವ್ಯಕ್ತಪಡಿಸಿದೆ. ಹೈಕೋರ್ಟ್ ಮಟ್ಟದ ನ್ಯಾಯ ಸಮಿತಿಗಳಿಗೆ ಅಗತ್ಯ ನೆರವು ನೀಡಬೇಕು ಹಾಗೂ ಆಗಸ್ಟ್ 23ಕ್ಕೆ ಕೈಗೊಂಡಿರುವ ಕ್ರಮ ಕುರಿತು ವಿವರಣೆ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ತಿಳಿಸಿ ವಿಚಾರಣೆ ಮುಂದೂಡಿದೆ.