ಬೆಂಗಳೂರು: ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮೀಸಲು ನಿಗದಿಪಡಿಸಿ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಪಾಲಿಕೆ ಸದಸ್ಯ ಸಮಿವುಲ್ಲಾ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಸ್. ಜಿ. ಪಂಡಿತ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ. ಪ್ರತಿವಾದಿಗಳಾದ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ನೋಟಿಸ್ ಜಾರಿಗೆ ಆದೇಶಿಸಿದೆ.
ಅರ್ಜಿದಾರರ ಕೋರಿಕೆ:
ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಸಾಮಾನ್ಯ-ಮಹಿಳೆ ಮೀಸಲು ನಿಗದಿಪಡಿಸಿ 2021ರ ಫೆ.11ರಂದು ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿರುವ ಅರ್ಜಿದಾರರು 2018ರಿಂದ ಸತತವಾಗಿ ಮೇಯರ್ ಸ್ಥಾನವನ್ನು ಮಹಿಳೆಗೆ ನೀಡಲಾಗುತ್ತಿದೆ. 2018ರ ಜ.24ರಿಂದ ನ.17ರವರೆಗೆ ಎಸ್ಸಿ-ಮಹಿಳೆ, ಸಾಮಾನ್ಯ-ಮಹಿಳೆ ಮೀಸಲು ನಿಗದಿಪಡಿಸಲಾಗಿತ್ತು. 2020ರಲ್ಲಿ ಬಿಸಿಎ-ಮಹಿಳೆ ಇತ್ತು. ಈಗ ಸಾಮಾನ್ಯ-ಮಹಿಳೆ ನಿಗದಿಪಡಿಸಲಾಗಿದೆ. ಇದು ಕಾನೂನುಬಾಹಿರವಾಗಿದ್ದು, ಸರ್ಕಾರದ ಅಧಿಸೂಚನೆ ರದ್ದುಪಡಿಸಿ ಮೇಯರ್ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿರಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.