ಬೆಂಗಳೂರು: ನಗರದ ಪಾದಚಾರಿ ಮಾರ್ಗಗಳ ಮೇಲೆ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸಲು ಬೆಸ್ಕಾಂಗೆ ಅನುಮತಿ ನೀಡಲಾಗಿದೆಯೇ ಎಂಬ ಕುರಿತು ಮಾಹಿತಿ ನೀಡುವಂತೆ ಹೈಕೋರ್ಟ್ ಬಿಬಿಎಂಪಿಗೆ ಸೂಚಿಸಿದೆ.
ನಗರದ ಹಲವೆಡೆ ಪಾದಚಾರಿ ಮಾರ್ಗಗಳು ಮತ್ತು ರಾಜಕಾಲುವೆಗಳ ಮೇಲೆ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸಿರುವ ಬೆಸ್ಕಾಂ ಕ್ರಮಕ್ಕೆ ಆಕ್ಷೇಪಿಸಿ ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ. ಅತ್ರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರ ನೇತೃತ್ವದ ವಿಭಾಗೀಯ ಪೀಠ ಬಿಬಿಎಂಪಿಯಿಂದ ಈ ಮಾಹಿತಿ ಕೇಳಿದೆ.
ವಿಚಾರಣೆ ವೇಳೆ ಬೆಸ್ಕಾಂ ಪರ ವಕೀಲರು ವಾದಿಸಿ, ಪಾದಚಾರಿಗಳಿಗೆ ತೊಂದರೆಯಾಗದಂತೆ ಟ್ರಾನ್ಸ್ ಫಾರ್ಮರ್ಗಳನ್ನು ವಿನ್ಯಾಸಗೊಳಿಸಲಾಗಿದೆ. ಹಾಗೆಯೇ ಜನರ ಓಡಾಟಕ್ಕೆ ತೊಂದರೆಯಾಗದಂತೆ ಎತ್ತರಿಸಲಾಗಿದೆ. 3,196 ಕಡೆ ಇಂತಹ ಟ್ರಾನ್ಸ್ ಫಾರ್ಮರ್ ಅಳವಡಿಸಲಾಗಿದೆ. ಅವುಗಳನ್ನು ತೆರವುಗೊಳಿಸಲು ಕಷ್ಟಸಾಧ್ಯ. ಹೀಗಾಗಿ ಜನರಿಗೆ ಸಮಸ್ಯೆಯಾಗಿಲ್ಲ ಎಂಬುದನ್ನು ವಿವರಿಸಲು ಅವಕಾಶ ನೀಡಬೇಕು ಎಂದು ಕೋರಿದರು.
ಓದಿ: ಗೋಡ್ಸೆ ಪ್ರತಿಮೆ ಪೂಜಿಸುವವರು ದೇಶಪ್ರೇಮದ ಪಾಠ ಬೋಧಿಸುತ್ತಿರುವುದು ವಿಪರ್ಯಾಸ: ಸಿದ್ದರಾಮಯ್ಯ
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಪಾದಚಾರಿ ಮಾರ್ಗಗಳ ಮೇಲೆ ಟ್ರಾನ್ಸ್ ಫಾರ್ಮರ್ ಅಳವಡಿಸಲು ಬಿಬಿಎಂಪಿಯಿಂದ ಅನುಮತಿ ಪಡೆದಿದ್ದೀರಾ ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಬೆಸ್ಕಾಂ ಪರ ವಕೀಲರು, ಟೆಲಿಗ್ರಾಫ್ ಕಾಯ್ದೆ ಹಾಗೂ ವಿದ್ಯುತ್ ಕಾಯ್ದೆ ಅಡಿಯಲ್ಲಿ ಟ್ರಾನ್ಸಫಾರ್ಮರ್ ಅಳವಡಿಸಲಾಗಿದೆ ಎಂದರು. ಇದಕ್ಕೆ ಒಪ್ಪದ ಪೀಠ, ಪಾದಚಾರಿ ಮಾರ್ಗಗಳನ್ನು ಬಿಬಿಎಂಪಿ ನಿರ್ವಹಣೆ ಮಾಡುತ್ತದೆ. ಹೀಗಾಗಿ ಅಳವಡಿಕೆಗೆ ಪಾಲಿಕೆ ಅನುಮತಿ ನೀಡಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.
ಅರ್ಜಿದಾರರ ಕೋರಿಕೆ : ಪಾದಚಾರಿ ಮಾರ್ಗಗಳನ್ನು ಅಕ್ರಮಿಸಿರುವ ಟ್ರಾನ್ಸ್ಫಾರ್ಮರ್ಗಳಿಂದ ವಿದ್ಯುತ್ ಸೋರಿಕೆಯಾಗಿ ಅವಘಡ ಸಂಭವಿಸುವ ಸಾಧ್ಯತೆ ಇರುತ್ತದೆ. ಇದರಿಂದ ಶಾಲಾ ಮಕ್ಕಳು, ವೃದ್ಧರು ಮತ್ತು ಅಮಾಯಕ ಪಾದಚಾರಿಗಳು ಅಪಾಯಕ್ಕೆ ಸಿಲುಕಿಕೊಳ್ಳುತ್ತಾರೆ. ಆದ್ದರಿಂದ ಪಾದಚಾರಿ ಮಾರ್ಗ ಮತ್ತು ರಾಜಕಾಲುವೆ ಮೇಲಿನ ಟ್ರಾನ್ಸ್‌ಫಾರ್ಮರ್‌ಗಳನ್ನು ಕಾಲಮಿತಿಯೊಳಗೆ ತೆರವುಗೊಳಿಸಲು ಮತ್ತು ಸ್ಥಳಾಂತರಿಸಲು ಬೆಸ್ಕಾಂಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.