ಬೆಂಗಳೂರು: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ 62 ವರ್ಷದ ವೃದ್ಧನಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಹೈಕೋರ್ಟ್ ರದ್ದುಪಡಿಸಿದೆ.
ಕೋಲಾರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ವಿಧಿಸಿರುವ ಗಲ್ಲು ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಆರೋಪಿ ವೆಂಕಟೇಶಪ್ಪ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾ.ಜಿ.ನರೇಂದರ್ ನೇತೃತ್ವದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಪೀಠ ತನ್ನ ಆದೇಶದಲ್ಲಿ, ತನಿಖಾಧಿಕಾರಿಗಳು ದೋಷಾರೋಪ ಪಟ್ಟಿಯೊಂದಿಗೆ ಡಿಎನ್‌ಎ ವರದಿ ಸಲ್ಲಿಸಿದ್ದಾರೆ. ಆದರೆ, ಡಿಎನ್‌ಎ ವರದಿ ನೈಜತೆ ಬಗ್ಗೆ ಅನುಮಾನವಿದೆ. ಹೊಸದಾಗಿ ರಕ್ತ ಮತ್ತು ವೀರ್ಯದ ಮಾದರಿ ಪರೀಕ್ಷೆ ನಡೆಸಲು ಆದೇಶಿಸುವಂತೆ ಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿದೆ.
ಡಿಎಎನ್ ವರದಿ ನೀಡಿರುವವರನ್ನು ವಿಚಾರಣೆಗೆ ಕರೆಸುವುದು ಅಗತ್ಯವಿಲ್ಲ ಎಂದೂ ಹೇಳಿದೆ. ಆ ಮೂಲಕ ಡಿಎನ್‌ಎ ವರದಿ ನೀಡಿದವರು ದಾಖಲಿಸಬಹುದಾಗಿದ್ದ ಸಾಕ್ಷ್ಯವನ್ನು ಪೂರ್ವ ನಿರ್ಧಾರ ಮಾಡಿರುವುದು ನ್ಯಾಯ ಸಮ್ಮತಲ್ಲ. ಡಿಎನ್‌ಎ ವರದಿ ನೀಡಿರುವವರನ್ನು ಪಾಟಿ ಸವಾಲಿಗೆ ಗುರಿಪಡಿಸಲು ಪ್ರಕರಣವನ್ನು ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಲು ಅರ್ಜಿದಾರರು ಕೋರಿದ್ದಾರೆ.
ಹೀಗಾಗಿ, ವರದಿ ಕೊಟ್ಟವರ ಪಾಟಿ ಸವಾಲು ಮಾಡದಿದ್ದರೆ ನ್ಯಾಯ ಸಮ್ಮತ ವಿಚಾರಣೆ ನಿರಾಕರಿಸಿದಂತಾಗುತ್ತದೆ. ವಿಚಾರಣಾ ನ್ಯಾಯಾಲಯ ಮರಣ ದಂಡನೆಯಂತಹ ಗಂಭೀರ ಸ್ವರೂಪದ ಶಿಕ್ಷೆಯನ್ನು ನೀಡಿರುವುದಕ್ಕೆ ಸೂಕ್ತ ಕಾರಣ ನೀಡಿಲ್ಲ ಎಂದು ಅಭಿಪ್ರಾಯಪಟ್ಟು ಆರೋಪಿಗೆ ವಿಧಿಸಿರುವ ಗಲ್ಲು ಶಿಕ್ಷೆಯನ್ನು ರದ್ದುಪಡಿಸಿದೆ. ಹಾಗೆಯೇ, ಪ್ರಕರಣವನ್ನು ಆರು ತಿಂಗಳಲ್ಲಿ ಹೊಸದಾಗಿ ಮರು ವಿಚಾರಣೆ ನಡೆಸುವಂತೆ ಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಪ್ರಕರಣವೇನು?
12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಂಬಂಧ ಮೇಮಗಲ್ ಠಾಣಾ ಪೊಲೀಸರು, ಪೊಕ್ಸೊ ಕಾಯ್ದೆ ಸೆಕ್ಷನ್ 4 ಮತ್ತು 6 ಹಾಗೂ ಭಾರತೀಯ ದಂಡ ಸಂಹಿತೆ 376 ಅಡಿ 2018ರ ಮೇ 5ರಂದು ವೆಂಕಟೇಶಪ್ಪ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಕೋಲಾರದ ಜಿಲ್ಲಾ ನ್ಯಾಯಾಲಯ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ 2020ರ ಜ.17ರಂದು ಆದೇಶಿಸಿತ್ತು.