ಬೆಂಗಳೂರು: ಕಂಟೈನ್ಮೆಂಟ್ ವಲಯಗಳಲ್ಲಿ ಕೋವಿಡ್-19 ಮಾರ್ಗಸೂಚಿಗಳನ್ನ (ಎಸ್‍ಓಪಿ) ಕಟ್ಟುನಿಟ್ಟಾಗಿ ಪಾಲಿಸುವಲ್ಲಿ ಹಾಗೂ ಅಲ್ಲಿನ ಜನರಿಗೆ ಆಹಾರ ಪದಾರ್ಥಗಳನ್ನ ಪೂರೈಸುವಲ್ಲಿ ಬಿಬಿಎಂಪಿ ವಿಫಲವಾಗಿದ್ದು, ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದೆ.
ಕೊರೊನಾ ಸಂಬಂಧಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ, ಕೊರೊನಾ ನಿರ್ವಹಣೆ ಕುರಿತು ವಿವರಣೆ ಕೇಳಿತು. ಬಿಬಿಎಂಪಿ ವಕೀಲರಿಂದ ಸಮಾಧಾನಕರ ಉತ್ತರ ಬಾರದ ಹಿನ್ನೆಲೆಯಲ್ಲಿ ಪಾಲಿಕೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಕಂಟೈನ್ಮೆಂಟ್ ವಲಯಗಳಲ್ಲಿ ಮಾರ್ಗಸೂಚಿ ಅನುಷ್ಠಾನಗೊಳಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ.
ಅಲ್ಲದೆ ಕಂಟೈನ್ಮೆಂಟ್ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಜನರಿಗೆ ಆಹಾರ ಪದಾರ್ಥಗಳು ಸೇರಿದಂತೆ ಜೀವನಾವಶ್ಯಕ ವಸ್ತುಗಳನ್ನ ಪೂರೈಸುವಲ್ಲಿ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ತಕ್ಷಣ ತನ್ನದೇ ಆಡಳಿತ ಯಂತ್ರ ಬಳಸಿಕೊಂಡು ಕಂಟೈನ್ಮೆಂಟ್ ವಲಯಗಳಲ್ಲಿ ಮಾರ್ಗಸೂಚಿಗಳನ್ನ ಕಟ್ಟುನಿಟ್ಟಾಗಿ ಜಾರಿಗೆ ತರಲು ಮತ್ತು ಅಲ್ಲಿನ ಜನರಿಗೆ ಆಹಾರ ಪದಾರ್ಥ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿತು.
ಇದಕ್ಕೂ ಮೊದಲು ಬಿಬಿಎಂಪಿ ಪರ ವಕೀಲರು ವಿವರಿಸಿ, ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಪಡಿತರ ಅಂಗಡಿಗಳು ತೆರೆದಿವೆ. ಹಾಗೆಯೇ ಕಂಟೈನ್ಮೆಂಟ್ ಪ್ರದೇಶಗಳ ಜನರಿಗೆ ದಿನ ಬಳಕೆಯ ವಸ್ತುಗಳ ಖರೀದಿಗೆ ಹೋಗಿ-ಬರಲು ಅವಕಾಶವಿದೆ. ಇವೆಲ್ಲದರಿಂದಾಗಿ ಕೋವಿಡ್-19 ಮಾರ್ಗಸೂಚಿಗಳನ್ನ ಜನರು ಪಾಲಿಸುತ್ತಿಲ್ಲ ಎಂದರು. ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಪೀಠ, ತನ್ನದೇ ಮಾರ್ಗಸೂಚಿಗಳನ್ನು ಅನುಷ್ಠಾನಕ್ಕೆ ತರಲು ಬಿಎಂಪಿಯಿಂದ ಆಗುತ್ತಿಲ್ಲ. ಕಂಟೈನ್ಮೆಂಟ್ ವಾರ್ಡ್‍ಗಳಿರುವುದು ಬಿಬಿಎಂಪಿ ವ್ಯಾಪ್ತಿಯಲ್ಲಿಯೇ ಹೊರತು ವಿದೇಶದಲ್ಲಲ್ಲ. ಪ್ರತಿಯೊಂದಕ್ಕೂ ಬಿಬಿಎಂಪಿ ನೆಪ ಹೇಳುವುದನ್ನು ಅಭ್ಯಾಸ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಸರ್ಕಾರವೇ ಜವಾಬ್ದಾರಿಯುತವಾಗಿ ಕೋವಿಡ್ ನಿರ್ವಹಣೆ ಮಾಡಬೇಕು ಎಂದು ಸೂಚಿಸಿತು.