ಬೆಂಗಳೂರು: ಹೈಕೋರ್ಟ್ ಸೂಚನೆ ಮೇರೆಗೆ ಸಂಕಷ್ಟದಲ್ಲಿರುವ ಜನರ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಕಾನೂನು ಸೇವಾ ಪ್ರಾಧಿಕಾರದ "ಅರೆ ನ್ಯಾಯಿಕ ಸ್ವಯಂ ಸೇವಕರು" (ಪ್ಯಾರಾ ಲೀಗಲ್ ವಾಲಂಟಿಯರ್) ಗಳಿಗೆ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ.
ಕೆಲವು ಕಡೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆಗಳೂ ನಡೆದಿವೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹೈಕೋರ್ಟ್ ಮುಂದೆ ನೋವು ತೋಡಿಕೊಂಡಿದೆ. ಲಾಕ್‌ಡೌನ್ ಅವಧಿಯಲ್ಲಿ ಸಂತ್ರಸ್ತರ ಸ್ಥಿತಿಗತಿ ಹೇಗಿದೆ ಎಂಬುದರ ಕುರಿತು ಹೈಕೋರ್ಟ್‌ಗೆ ವರದಿ ನೀಡುವ ಕೆಲಸದ ಜತೆಗೆ ಸಂತ್ರಸ್ತರ ಸೇವೆಯಲ್ಲಿ ತೊಡಗಿರುವ ಪ್ಯಾರಾ ಲೀಗಲ್ ವಾಲಂಟಿಯರ್ಸ್ (ಪಿಎಲ್‌ವಿ) ಗಳು ತಮ್ಮಸಂಕಷ್ಟದ ಕುರಿತು ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
ಕೊರೊನಾ ಸಂಬಂಧಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತ್ವತ್ವದ ವಿಭಾಗೀಯ ಪೀಠದ ಎದುರು ಕಾನೂನು ಸೇವಾ ಪ್ರಾಧಿಕಾರದ ಪರ ವಕೀಲರು ಪೊಲೀಸರ ವರ್ತನೆ ಬಗ್ಗೆ ದೂರಿದ್ದಾರೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡುವ ವಿವಿಧ ಚಟುವಟಿಕೆಗಳಲ್ಲಿ ರಾಜ್ಯ ಕಾನೂನು ಪ್ರಾಧಿಕಾರದ ಪ್ಯಾರಾ ಲೀಗಲ್ ವಾಲಂಟಿಯರ್ಸ್ ತೊಡಗಿಸಿಕೊಂಡಿದ್ದಾರೆ. ಇವರಿಗೆ ಆಯಾ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗಳು ಪಾಸ್ ಕೊಟ್ಟಿದ್ದಾರೆ. ಆದರೆ, ಈ ಪಾಸ್‍ಗಳ ಆಧಾರದಲ್ಲಿ ಪಿಎಲ್‍ಒಗಳಿಗೆ ಓಡಾಡಲು ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ.
ಅಷ್ಟೇ ಅಲ್ಲ, ಕಾನೂನು ಸೇವಾಪ್ರಾಧಿಕಾರದ ಅಸ್ತಿತ್ವದ ಬಗ್ಗೆಯೇ ಪೋಲಿಸರು ಅಜ್ಞಾನ ಹೊಂದಿದ್ದಾರೆ. ಬೆಂಗಳೂರು ನಗರದಲ್ಲಿರುವ ಪೊಲೀಸರಿಗೆ ಇಂತದ್ದೊಂದು ಪ್ರಾಧಿಕಾರ ಇರುವ ಬಗ್ಗೆ ಮಾಹಿತಿ ಇಲ್ಲ. ಪರಿಣಾಮ ಪಿಲ್‍ಒಗಳಿಗೆ ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆಗಳು ನಡೆದಿವೆ ಎಂದು ಪೀಠಕ್ಕೆ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಪೀಠ, ಪ್ರಾಧಿಕಾರದ ವರದಿ ಗಮನಿಸಿದರೆ ಪರಿಸ್ಥಿತಿಯ ಅರಿವಾಗುತ್ತದೆ. ಅದ್ದರಿಂದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ನೀಡಿರುವ ಪಾಸ್‍ಗಳನ್ನು ಪೊಲೀಸರು ಮಾನ್ಯ ಮಾಡಬೇಕು. ಈ ಕುರಿತು ಎಲ್ಲ ಪೊಲೀಸರಿಗೆ ಮಾಹಿತಿ ತಲುಪುವಂತೆ ರಾಜ್ಯ ಪೋಲಿಸ್ ಮಹಾನಿರ್ದೇಶಕರು ಅಗತ್ಯ ಲಿಖಿತ ನಿರ್ದೇಶನ ಹೊರಡಿಸಬೇಕು ಎಂದು ತಾಕೀತು ಮಾಡಿದೆ.